Bandipur bayanaka kadinalli, ಬಂಡೀಪುರದ ಕಾಡಿನ ನಡುವೆ…..

ಸುಮಾರು 36 ವರ್ಷಗಳ ನಂತರ ನನಗೊಂದು ಇಂಥಹ ಅದ್ಭುತ ಅನುಭವ ಕಾದಿರುತ್ತದೆ ಎಂದು ನಾನೆಂದೂ ಎಣಿಸಿರಲಿಲ್ಲ. ಏಕೆಂದರೆ ಒಂದು ದಟ್ಟ ಕಾಡನ್ನು, ಅಲ್ಲಿನ ಸ್ವಚ್ಛಂದ ಮೃಗಗಳನ್ನು ಅಷ್ಟು ಹತ್ತಿರದಿಂದ ನೋಡುವ, ಅದರ ರೋಮಾಂಚನವನ್ನು ಅನುಭವಿಸುವ ಸಂದರ್ಭ ಅದಾಗಿತ್ತು. ನಾನು ನೋಡಿದ ನಯಾಗರ ಜಲಪಾತಕ್ಕಿಂತ, ಗ್ರ್ಯಾಂಡ್ ಕಾನಿಯನ್ಗಿಂತಲೂ ಹೆಚ್ಚು ಕುತೂಹಲವನ್ನು ಹುಟ್ಟು ಹಾಕಿದ್ದು, ಮನಸ್ಸನ್ನು ಪ್ರತಿಕ್ಷಣವೂ ತವಕಕ್ಕೆ ತಳ್ಳಿದ್ದು ಬಂಡೀಪುರ ಕಾನನದ ಅನುಭವ. ಇಂಥಹ ಅವಕಾಶವನ್ನು ನನಗೆ ಕಲ್ಪಿಸಿಕೊಟ್ಟ ಅತ್ಯಂತ ಆತ್ಮೀಯ ಗೆಳೆಯ ಸಂತೋಷ ತಮ್ಮಣ್ಣ ಹಾಗೂ ಕುಮಾರಸ್ವಾಮಿ ಅವರಿಗೆ ಋಣಿ ನಾನು. ಹಾಗೆಯೇ ಹೀಗೆ ಕಾಡನ್ನು ಅತ್ಯಂತ ಸನಿಹದಿಂದ ಸೀಳಿ ನೋಡಲು ಇನ್ನಿಲ್ಲದ ಕಕ್ಕುಲತೆ ತೋರಿಸಿ, ಬಲವಂತದಿಂದ ನನ್ನನ್ನು “ಕಾಡಿಗೆ” ಕಳುಹಿಸಿ ದೊಡ್ಡ ಮೊತ್ತದ ಅನುಭವ ಸಿಗುವಂತೆ ಮಾಡಿದ ಶಾರದಾ ನಾಯಕ್ಗೂ ನನ್ನ ಕೃತಜ್ಞತೆ ಸಲ್ಲುತ್ತದೆ.
ನಾನು ಇಲ್ಲಿಯವರೆಗೆ ದಟ್ಟಡವಿಗಳಲ್ಲಿ, ಬೆಟ್ಟ ಗುಡ್ಡಗಳಲ್ಲಿ ನೂರಾರು ಬಾರಿ ಸುತ್ತಿದ್ದೇನೆ. ಅಲೆದಿದ್ದೇನೆ. ಹಲವಾರು ರಾಷ್ಟ್ರೀಯ ಉದ್ಯಾನವನಗಳಲ್ಲಿ, ಪ್ರಾಣಿ ಸಂಗ್ರಹಾಲಯಗಳಲ್ಲಿ ಕಾಡು ಪ್ರಾಣಿಗಳನ್ನು ತೀರ ಸನಿಹದಿಂದ ನೋಡಿದ್ದೇನೆ. ಮೈದಡಿವಿದ್ದೇನೆ. ಡಿಸ್ಕವರಿ ಹಾಗೂ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ಗಳಲ್ಲಿ ಪ್ರಾಣಿ ಸಂಕುಲದ ಎಲ್ಲಾ ಮಗ್ಗಿಲುಗಳನ್ನು ನೋಡಿದ್ದೇನೆ. ಆದರೆ ದಟ್ಟಡವಿಗಳಲ್ಲಿ ವಿಹರಿಸುವ ಸ್ವಚ್ಛಂದ ಕಾಡು ಮೃಗಗಳನ್ನು ಸನಿಹದಿಂದ ನೋಡಿರಲಿಲ್ಲ. ಕಾಡು ಮೃಗಗಳೇ ತುಂಬಿರುವ, ಯಾವುದೇ ಕ್ಷಣದಲ್ಲಿ ಕಂಡರಿಯದ ಅಪಾಯ ಬಂದೊದಗಬಹುದಾದ ಕಾನನದಲ್ಲಿ ಅಲೆದಾಡಿರಿಲಿಲ್ಲ. ಅಂಥಹ ಎಲ್ಲಾ ಅಪಾಯಗಳು ಒಮ್ಮೆಲೇ ಬಂದೆರಗುವ ಸಾಧ್ಯತೆ ಇದ್ದ, ಮತ್ತೆ ನಾನು ನಾಡಿಗೆ ಹಿಂತಿರುಗುವ ಸಾಧ್ಯತೆ ಕಡಿಮೆ ಇದ್ದ ಬಂಡೀಪುರದ ಪ್ರವಾಸ ಅದು.
ನಾವುಗಳು ಎಲ್ಲಾ ಅನುಮತಿ, ಸಿದ್ಧತೆಯೊಂದಿಗೆ ಕಾಡಿಗೆ ಹೊರಟಾಗ ಮಧ್ಯಾಹ್ನ 12 ಗಂಟೆ. ಮೊದಲಿಗೆ ನಾವು ಹೊರಟಿದ್ದು ಕಲ್ಲಳ್ಳಿ ಗೆಸ್ಟ್ ಹೌಸ್ಗೆ. ಇದು ಬಂಡೀಪುರ ಫಾರೆಸ್ಟ್ನ ಮುಖ್ಯ ಗೆಸ್ಟ್ಹೌಸ್ನಿಂದ ಸುಮಾರು 40 ಕಿ. ಮೀ. ದೂರದಲ್ಲಿದೆ. ಗೋಪಾಲಸ್ವಾಮಿ ಬೆಟ್ಟದ ರಸ್ತೆಯಿಂದ ನುಗ್ಗಿ ನಮ್ಮ ಟಾಟಾ ಸಫಾರಿ ವಾಹನ ಅಲ್ಲಿನ ಕಲ್ಲು ಮುಳ್ಳುಗಳು, ಧೂಳು ತುಂಬಿದ ರಸ್ತೆಗಳ ಹೇರ್ಪಿನ್ ತಿರುವುಗಳಲ್ಲಿ ಹಾದು ಗುಂಡ್ಲುಪೇಟೆ- ಸುಲ್ತಾನ್ ಬತೇರಿ ಅಥವಾ ಕೇರಳ ರಸ್ತೆ ತಲುಪಿ ಕಾಡಿನ ನಡುವೆ ಇರುವ ಕಲ್ಲಳ್ಳಿ ಗೆಸ್ಟ್ಹೌಸ್ ತಲುಪಲು ನಾವು ಬರೋಬರಿ ತೆಗೆದುಕೊಂಡಿದ್ದು ಒಂದುಕಾಲು ಗಂಟೆ. ಚಾಮರಾಜನಗರ ಜಿಲ್ಲೆ ಹಳ್ಳಿಗಳು, ಅಲ್ಲಿನ ಅಮಾಯಕ ಜನ, ಕುಡಿಯಲು ನೀರಿಲ್ಲದೆ ಕೊರಗುತ್ತಿರುವ ಹಳ್ಳಿಗಳು, ಕೆಲಸವಿಲ್ಲದೆ ಊರು ಮುಂದಿನ ಅರಳಿ ಕಟ್ಟೆಗಳ ಮೇಲೆ ಕಾಲ ತಳ್ಳುವ ಜನ ಸಮುದಾಯ…. ಹೀಗೆ ಗ್ರಾಮೀಣ ಬದುಕಿನ ದರ್ಶನ ಲಭ್ಯವಾಗಿದ್ದು ಈ ಹಳ್ಳಿಗಳ ಮೇಲೆ ಹಾದುಹೋಗುವಾಗ…..ಆದರೂ ಈ ಸುಡು ಬಿಸಿಲಿನ ನಡುವೆಯೇ ಬೋರ್ವೆಲ್ಗಳ ನೀರನ್ನು ಬಳಸಿಯೇ ಆ ಭಾಗದಲ್ಲಿ ಜನ ಅಷ್ಟೋ ಇಷ್ಟೋ ವ್ಯವಸಾಯ ಮಾಡಿದ್ದರು. ರೈತ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದರು.
ಅಲ್ಲೇ ಬಿದ್ದುಕೊಂಡಿದ್ದ ಹಸಿರು ಗೇಟನ್ನು ಕುಕ್ಕಿ ಟಾಟಾ ಸಫಾರಿಯನ್ನು ಕಲ್ಲಳ್ಳಿ ಗೆಸ್ಟ್ ಕಡೆ ತೆಗೆದುಕೊಳ್ಳುತ್ತಿದ್ದಂತೆಯೇ ಅದೇನೋ ರೋಮಾಂಚನ. ಕಾಡು ಮೃಗಗಳ ನಾಡಿಗೆ ಕಾಲಿಟ್ಟ ಪುಳಕ. ಯಾವುದೇ ಕ್ಷಣದಲ್ಲಿ ಯಾವುದೇ ಕಾಡು ಪ್ರಾಣಿಯ ದಾಳಿಗೆ ತುತ್ತಾಗುವ ಅಪಾಯ ಅಪಾಯ ಅಲ್ಲಿತ್ತು…….
ಕಲ್ಕೆರೆ ಗೆಸ್ಟ್ ಹೌಸ್ನ ಹಾದಿಯಲ್ಲಿ ನಮ್ಮ ಸಫಾರಿ ಸಾಗುತ್ತಿದ್ದಾಗಲೇ ನಮ್ಮ ಮೇಲೆ ಮೊದಲ ದಾಳಿ ಮಾಡಿದ್ದು ಆ ಮುಸಲಧಾರೆ. ಅದೆಂಥಹ ಆರ್ಭಟ ಅವಳ ಆಗಮನದಲ್ಲಿ. ಕಿವಿಗಡಿಚಿಕ್ಕುವ ಸೊಕ್ಕು, ಮುಂದಿನ ಹಾದಿ ಕಾಣದಷ್ಟು ಧಾರಾಕಾರ, ಅಬ್ಬರ ಬಿರುಸು ಅವಳಿಗೆ. ದಟ್ಟ ಕಾಡಿನಲ್ಲಿ ನಿಂತು ಆರ್ಭಟಿಸುವ ಗುಡುಗು, ಇನ್ನೇನು ಎದೆ ಸೀಳಿತು ಎನ್ನುವಷ್ಟು ಕಣ್ಕುಕ್ಕುವ ಮಿಂಚನ್ನು ನೋಡುವುದೇ ಅದ್ಭುತ ಎನಿಸಿತು. ಸಿಡಿಲು, ಗುಡುಗುಗಳ ಆರ್ಭಟಕ್ಕೆ ಆ ಕಾಡಿಗೆ ಕಾಡೇ ತತ್ತರಿಸಿತ್ತು. ಕಾಡು ಮೃಗಗಳಿರಲಿ, ಸಣ್ಣ ಪಕ್ಷಿಗಳು ಕಾನದಂತಾದವು. ಎಲ್ಲವುಗಳಿಗೂ ಜೀವ ಭಯ……ನಮಗೆಲ್ಲಿ ಸಿಡಿಲು ಬಡಿಯುವುದೋ ಎಂಬ ಆತಂಕ ಮನದಲ್ಲಿ ಶತಪತ ಹಾಕತೊಡಗಿತು. ಮಳೆಯ ಆರ್ಭಟ ತಗ್ಗಲಿಲ್ಲ. ಸಿಡಿಲು, ಗುಡುಗುಗಳ ಭೋರ್ಗರೆತ ನಿಲ್ಲಲಿಲ್ಲ. ನಮ್ಮ ಎದೆಯಲ್ಲಿ ಢವ ಢವ ನಿಲ್ಲಲಿಲ್ಲ. ಎಲ್ಲಾ ದೇವರುಗಳ ಮೊದಲ ನೆನಪು ಅಲ್ಲಿ. ಕಷ್ಟ ಬಂದಾಗ ವೆಂಕಟರಮಣ……!
ಮಧ್ಯಾಹ್ನದ ಬಿರು ಬಿಸಿಲಿಗೆ ಪಳಪಳಿಸಬೇಕಾಗಿದ್ದ ಕಾನನದಲ್ಲಿ, ಮಳೆಯ ಭೋರ್ಗರೆತ, ಕವಿದ ಮೋಡಕ್ಕೆ ಇಡೀ ಕಾಡಿನಲ್ಲಿ ಕತ್ತಲೆಯ ಚಾದರ. ನಾವಿನ್ನು ಮುಂದೆ ಹೋಗಲು ಸಾಧ್ಯವಿಲ್ಲ. ವಾಪಸ್ ಹೊರಡೋಣ ಎನ್ನುವಷ್ಟು ಭಯಾನಕ ವಾತಾವರಣ. ಬೀಸಿದ ಗಾಳಿಗೆ ಉದುರಿ ಬೀಳುತ್ತಿದ್ದ ಒಣಗಿದ ಮರಗಳು ಒಂದು ಕಡೆ. ಕೆಸರು ನೀರಿನ ಝಳ ಝಳ ಮತ್ತೊಂದೆಡೆ. ಯಾವ ಪ್ರಾಣಿ ದಿಕ್ಕುತಪ್ಪಿ ಬಂದು ಮೇಲೆರಗುವುದೋ ಏನು ಕದಿದೆಯೋ ಎಂಬ ಆತಂಕದ ವಾತಾವರಣ ಅಲ್ಲಿ. ಎಲ್ಲಿ ನೋಡಿದರೂ ಒಣಗಿ ಬಿದ್ದ ಮರದ ದಿಮ್ಮಿಗಳು, ಅಲ್ಲಲ್ಲಿ ಬಿದ್ದ ಗುಳಿಗಳು, ಕಣ್ಣು ಹಾಯಿಸಿದಷ್ಟು ಕುರುಚಲು ಗಿಡಗಳು, ಬೇಲಿ ಮುಳ್ಳುಗಳು…..
ದೂರದಲ್ಲೆಲ್ಲೋ ಕಾಣಿಸಿತು ಒಂದು ಹೆಂಚಿನ ಮನೆ. ಅಲ್ಲಿಂದ ಹೊರಬರುತಿದ್ದ ಹೊಗೆಯೇ ಅಲ್ಯಾರೋ ಇರಬೇಕೆಂಬುದನ್ನು ಖಚಿತಪಡಿಸಿತು. …….

Advertisements

1 ಟಿಪ್ಪಣಿ

 1. ರಮ್ಯ ಸುಂದರ ಕಥನ.


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಏಪ್ರಿಲ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್   ಮೇ »
   123
  45678910
  11121314151617
  18192021222324
  252627282930  
 • ವಿಭಾಗಗಳು