ಪಾರ್ವತಿ: ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು

ಪಾರ್ವತಿ:

ತಾಯಂದಿರ ದಿನ ಪಾರ್ವತಿ ತುಂಬಾ ನೆನಪಾಗುತ್ತಿದ್ದಾಳೆ. ಹಲವು ವರ್ಷಗಳ ನಂತರ ತಳಮಳ ಹುಟ್ಟಿಹಾಕಿದ್ದಾಳೆ. ಆಕೆಗಿದ್ದ ಸ್ವಾಮಿನಿಷ್ಠೆ, ಪ್ರೀತಿ, ತನ್ನದು, ನನ್ನವರೆಂಬ ನಿವರ್ಾಜ್ಯ ಪ್ರೇಮ ಇಂದು ಕಾಡಹತ್ತಿದೆ. ಅಂಥದ್ದೊಂದು ಜೀವ ಎಲ್ಲಿಯಾದರೂ, ಯಾರಾದರೂ ಇದ್ದಾರೆಯೇ ಎಂದು ಮನಸ್ಸು ಹುಡುಕುತ್ತಲೇ ಇದೆ. ಆದ್ದರಿಂದಲೇ ಬಹಳ ವರ್ಷಗಳಿಂದ ಪಾರ್ವತಿ ಗುಣವುಳ್ಳ ಮಹಿಳೆಯರು ಎಲ್ಲಿಯಾದರೂ ಕಾಣುವರೇ ಎಂದು ಹುಡುಕಾಟ ನಡೆಸಿದ್ದೇನೆ. ಇಷ್ಟು ವರ್ಷ ಕಳೆದರೂ ಎಲ್ಲೂ ಅಂಥಹ ಅದ್ಭುತ ಗುಣಗಳುಳ್ಳ ಮಹಿಳೆ ನನಗೆ ಕಾಣ ಸಿಗಲೇ ಇಲ್ಲಾ. ಅದೆಂಥ ಪ್ರೀತಿ ತೋರಿದಳು ನಮಗೆ ಆಕೆ ! ಆಕೆ ನನ್ನ ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು…..ಅವಳ ಪ್ರೀತಿಯ ಬೇಲಿಯಲ್ಲಿ ನಾವೆಲ್ಲಾ ಮಿಂದು ಬೆಳೆದಿದ್ದು ಸುಮಾರು 25 ವರ್ಷ ಕಳೆದ ನಂತರವೂ ನನ್ನನ್ನು ಕಾಡುತ್ತಿದೆ. 
ನಿಜಕ್ಕೂ ಆಕೆ ನನ್ನ ತಾಯಿಗಿಂತ ಮಿಗಿಲು. ಪಾರ್ವತಿ ಏಕೆ ಭಿನ್ನವಾಗಿ ಕಾಣುತ್ತಾಳೆಂದರೆ ಆಕೆ ಎಲ್ಲವೂ ಆಗಿದ್ದಳು. ನಮ್ಮ ಮನೆಯಲ್ಲಿದ್ದ ಅಷ್ಟೂ ಎಮ್ಮೆ, ಕೋಣ, ಹಸುಗಳ ಜತೆ ಆಕೆ ಮಾತನಾಡುತ್ತಿದ್ದಳು. ಇಡೀ ಊರಿನ ಯಾವುದೇ ಭಾಗದಲ್ಲಿ ಎಲ್ಲೇ ಸಗಣಿ ಬಿದ್ದಿದ್ದರೂ ಅದು ಅರ್ಧ ಕ್ಷಣದಲ್ಲಿ ಅವಳ ಕಂಕುಳಲ್ಲಿ ಇದ್ದ ಪುಟ್ಟಿಯಲ್ಲಿ ತುಂಬಿರುತ್ತಿತ್ತು. ಊರ ಹೊರಗೆ ಎಮ್ಮೆ ಮೇಯಿಸಿಕೊಂಡು ಸಂಜೆ ಬರುವಾಗಲಂತೂ ಆ ಪುಟ್ಟಿಯ ಮೇಲೆ ಸಗಣಿಯ ಪೆಂಡಿಗಳು ತುಂಬಿರುತ್ತಿದ್ದವು. ಎಮ್ಮೆ ಮೇಯುಸುತ್ತಾ ಸಿಕ್ಕ ಸಗಣಿಯನ್ನು ಹಡ್ಲಲ್ಲಿದ್ದ ಕಲ್ಲುಗಳ ಮೇಲೆ ತೊಟ್ಟಿ ಆಕೆ ಸಗಣಿ ಪೆಂಡಿ ಮಾಡುತ್ತಿದ್ದಳು. ಒಂದೊಂದು ಎಮ್ಮೆ, ಕರು, ಕೋಣ, ಹಸುವಿಗೆ  ಒಂದೊಂದು ಹೆಸರಿಟ್ಟಿದ್ದಳು. ಆಕೆ ಊರತುಂಬಾ ಎಮ್ಮೆ ಪಾರ್ವತಿ ಎಂದೇ ಹೆಸರಾಗಿದ್ದಳು. ಅವಳ ಕಣ್ಣ ಇಶಾರೆಗೆ ಆ ಮೂಕ ಪ್ರಾಣಿಗಳು ಮಾತನಾಡುತ್ತಿದ್ದವು. ಅವಳು ಎದುರಿಗಿದ್ದರೆ, ಅವಳು ಮೈದಡವಿದರೆ ಮಾತ್ರ ಅವುಗಳು ಹಾಲು ಕೊಡುತ್ತಿದ್ದವು. ಓ ಅವುಗಳ ಬಾಣಂತನ, ಮದುವೆ ಎಲ್ಲವನ್ನೂ ಪಾರ್ವತಿಯೇ ಮಾಡುತ್ತಿದ್ದಳು ! ಅವುಗಳು ಕಾಯಿಲೆ ಬಿದ್ದರೆ ಅಕ್ಷರಶ: ಆಕೆ ಅಮ್ಮನಾಗಿರುತ್ತಿದ್ದಳು……ದೊಡ್ಡಪ್ಪ, ಮುಗಕರ್ಿಗೆ ನಾಲಿಗೆ ಊತ ಬಂದಿದೆ, ಕಿವಿ ಹಕರ್ಿ ಮಣಕ ಬೆದೆಗೆ ಬಂದಿದೆ ಎನ್ನುವುದರಿಂದ ಹಿಡಿದು ಆ ಮೂಕ ಪ್ರಾಣಿಗಳ ಗಂಜಲದ ವಾಸನೆವರೆಗೂ ಆಕೆಗೆ ತಿಳುವಳಿಕೆ ಇತ್ತು. ಮುಗಕರ್ಿಯ ಮಕ್ಕಳು, ಮರಿಮಕ್ಕಳತನಕ ಎಲ್ಲರ ಹೆಸರು ಆಕೆ ನಾಲಿಗೆ ಮೇಲಿರುತ್ತಿತ್ತು. ಅವುಗಳಿಗೆ ಹೆಸರಿಡಲು ಅವಳೇ ಪುರೋಹಿತಳಾಗಿರುತ್ತಿದ್ದಳು. ಎಲ್ಲೋ ದಂಡಿನವರ ಗುಂಡಿಗೆ ಬಿದ್ದು ಕರು ಸಿಕ್ಕಿಕೊಂಡರೆ “ದಂಡಿನ ಗುಂಡಿ ಕರು” ಹೆಸರು ಚಾಲ್ತಿಗೆ ಬಂದು ಬಿಡುತ್ತಿತ್ತು. ಬರೋಬರಿ 30 ಎಮ್ಮೆ, ಕೋಣಗಳು, 20 ಹಸು ಕರುಗಳನ್ನು ಅವಳು ಬೆಳಿಗ್ಗೆಯಿಂದ ಮೇಯಿಸಿಕೊಂಡು ಸಂಜೆ ತಂದು ಕೊಟ್ಟಿಗೆಗೆ ಕಟ್ಟುತ್ತಿದ್ದಳು. ಬೆಳಿಗ್ಗೆ ಐದು ಗಂಟೆಗೆ ಎದ್ದು ಕೊಟ್ಟಿಗೆ ಕಸ ಎತ್ತುವುದು. ಕರುಗಳನ್ನು ಬಿಟ್ಟು ಉಳಿದವುಗಳನ್ನು ಹೊರಗೆ ಕಟ್ಟುವುದು, ಕರುಗಳು ಹಾಲು ಕರೆದುಕೊಳ್ಳುವುದಕ್ಕೆ ಮುಂಚೆ ತಾಯಿ ಎಮ್ಮೆಗಳ ಕೆಚ್ಚಲನ್ನು ಮುಟ್ಟದಂತೆ ನಿಗಾವಹಿಸುವುದರಿಂದ ಹಿಡಿದು, ಯಾವ ಎಮ್ಮೆಯನ್ನು ಯಾವ ಗೊಂತಿಗೆ ಕಟ್ಟಬೇಕು, ಯಾವ ಹಸುವನ್ನು ಯಾವ ಬೇಲಿಯ ಬುಡಕ್ಕೆ ಕಟ್ಟಬೇಕು. ಯಾವುದಕ್ಕೆ ಶೀತವಾಗಿದೆ, ಯಾವುದು ಕುಂಟುತ್ತಿದೆ, ಯಾವುದಕ್ಕೆ ಮೇವು ಕಡಿಮೆ, ಹೆಚ್ಚಾಗಿದೆ ಎಲ್ಲವೂ ಈ “ಡಾಕ್ಟರ್” ಪಾರ್ವತಿಗೆ ತಿಳಿದಿರುತಿತ್ತು. ಅವಳು ಬೆಳಿಗ್ಗೆ ಎದ್ದು ಅವಳ ಸೈನ್ಯದ ಸಮೇತ ಹಡ್ಲು ಅಂದರೆ ಊರ ಹೊರಗಿನ ಹುಲ್ಲುಗಾವಲಿಗೆ ಹೊರಟಲೆಂದರೆ ಅದೊಂದು ಮೆರವಣಿಗೆ….ಮೆರವಣಿಗೆ ತುಂಬೆಲ್ಲಾ ಧೂಳು…….ಮುಗಿಲು ಮುಟ್ಟುತ್ತಿತ್ತು.
ಯಾವ ಸೊಪ್ಪನ್ನು ಅರೆದು ಕುಡಿಸಿದರೆ ಆ ಕಾಯಿಲೆ ಕಡಿಮೆಯಾಗುತ್ತದೆ, ಯಾವ ಗೊಟ್ಟದಲ್ಲಿ ನಾಟಿ ಔಷಧಿ ಕುಡಿಸಬೇಕು, ಹಾಲು ಕೊಡುವುದನ್ನು ಹೆಚ್ಚಿಸುವುದು ಹೇಗೆ, ಹಾಲು ಕೊಡುವ ಎಮ್ಮೆಗಳು ಬೇಗ “ಮಾನಸಿ” ಕೊಳ್ಳದಿರಲು ಏನು ಮಾಡಬೇಕು, ಹೀಗೆ ಎಲ್ಲಾ ಜ್ಞಾನ ಆಕೆಗಿತ್ತು. ಒಂದು ರೀತಿಯಲ್ಲಿ ಆಕೆ “ಪಶು ವೈದ್ಯೆ”.
ನಮ್ಮವು ಎಮ್ಮೆಗಳು ಎಂದು ಯಾರೂ ನೇರವಾಗಿ ಹಾಲು ಕರೆಯುವಂತಿರಲಿಲ್ಲ. ನಮ್ಮ ಅತ್ತಗೆಯಂದಿರು ಹೀಗೆ ಹಾಲು ಕರೆಯಲು ಹೋಗಿ ಮುಗಕರ್ಿಯಿಂದ ಒದೆಸಿಕೊಂಡು ಬಂದು ಶಾಪ ಹಾಕುತ್ತಿದ್ದರು. ಏಕೆಂದರೆ ಯಾರೇ ಹಾಲು ಕರೆಯಲು ಹೋದರೂ ಅವುಗಳು ಸಹಕರಿಸುತ್ತಿರಿಲ್ಲ. ಪಾರ್ವತಿ ಎದುರಿಗಿದ್ದರೆ ಮಾತ್ರ ಅವುಗಳು ಮಾತ್ರ ಮಾಉ ಕೇಳುತ್ತಿದ್ದವು.
ಯಾಕೆ ಬೋಸೂಡಿ ಸುಮ್ನೆ ನಿಲ್ಲಕ್ಕೆ ಆಗಲ್ವಾ, ಕೊಡೆ ಹಾಲನ್ನು, ಕದ್ದು ಉಳಿಸಿಕೊಳ್ಳುತ್ತೀಯಾ…..ಹೀಗೆ ತರಾವರಿ ಬೈಗಳಗಳನ್ನು ನಾವು ಬೆಳಿಗ್ಗೆ ಏಳುತ್ತಲೇ, ಅಮ್ಮ ಇರುತ್ತಿದ್ದ ಒಲೆ ಮುಂದೆ ಕುಳಿತುಕೊಂಡೇ ಕೇಳಿಸಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ರಾತ್ರಿ ಮಲಗಿದ್ದಾಗಲೂ ಕೊಟ್ಟಿಗೆಯಲ್ಲಿ ಪಾರ್ವತಿ ಹಾಗೂ ಅವಳ ಎಮ್ಮೆಗಳ ಮಾತುಕತೆ ಕಿವಿಗೆ ಬೀಳುತ್ತವೇ ಇತ್ತು. 
ಯಾಕೆ ಅವಳ ಹುಲ್ಲಿಗೆ ಬಾಯಿ ಹಾಕುತ್ತೀಯಾ, ನೀರು ಬೇಕೆನೆ, ಗಂಜಲ ಉಯ್ಯೆ, ಕರ ಹತ್ತಿರಕ್ಕೆ ಬಿಟ್ಟುಕೊಬೇಡ, ಯಾಕೆ ಅವಳನ್ನು ಒತ್ತಲಿಸುತ್ತೀಯಾ, ಕುಸ್ತಿಗೆ ಯಾಕೆ ಹೋಗಿದ್ದೀಯಾ, ಯಾಕೆ ಸುಮ್ಮನೆ ಮಲಗಕೆ ಆಗುವುದಿಲ್ಲವಾ, ಈಗ ಎದ್ದು ಬರಲಾ, ಗ್ರಹಚಾರ ಬಿಡುಸುತ್ತೇನೆ…..ಹೀಗೆ ರಾತ್ರಿ ಇಡೀ ಏನಾದರೊಂದು ಮಾತು  ಕಿವಿಗೆ ಬೀಳದೆ ಇರುತ್ತಿರಲಿಲ್ಲ. ಹಾಗಿತ್ತು ಆ ಮೂಕ ಪ್ರಾಣಿಗಳ – ಪಾರ್ವತಿ ನಡುವಿನ ಒಡನಾಟ.
ನಮ್ಮದೊಂದು ಕುರಿ, ಎಮ್ಮೆ, ಕೋಣ, ದನ, ಹಸುಗಳನ್ನು ಮೇಯಿಸುವ ಹಡ್ಲಿತ್ತು. ಅದೊಂಡು 20 ಎಕರೆಯಷ್ಟಿದ್ದ ವಿಶಾಲವಾದ ಹಸಿರು ನೆಲ ಅದು. ಈ ಕಡೆ ನಿಂತೆ ಆ ಕಡೆ ಕಾಣಿಸುತ್ತಿರಲಿಲ್ಲ. ಅಷ್ಟು ಎತ್ತರಕ್ಕೆ ಸದಾ ಹುಲ್ಲಿ ಬೆಳೆದು ನಿಂತಿರುತ್ತಿತ್ತು. ನಡುವಲ್ಲಿ ನೀರು ಹರಿಯುತ್ತಿತ್ತು. ಅಲ್ಲಲ್ಲಿ ನೀರು ಕುಡಿಸಲು ಗುಂಡಿಗಳಿದ್ದವು.  ಅಲ್ಲೊಂಡು ದೊಡ್ಡ ಗುಂಡಿ ಇತ್ತು. ಅಲ್ಲಿ ಆಗೊಮ್ಮೆ ಈಗೊಮ್ಮೆ ಎನ್ ಎಚ್ -4 ರಸ್ತೆಯಲ್ಲಿ ಹೋಗುತ್ತಿದ್ದ ಮಿಲಿಟರಿ ಲಾರಿಗಳ ಸೈನಿಕರು ವಿಶ್ರಮಿಸಿಕೊಳ್ಳಲು ನಿಲ್ಲಿಸಿ ಅಡುಗೆ ಮಾಡಿಕೊಂಡು ಊಟ ಮಾಡಿ ಹೋಗುತ್ತಿದ್ದರಂತೆ. ಹೀಗೆ ಒಂದೈದಾರು ಬಾರಿ ಆದ ನಂತರ ಅದಕ್ಕೆ ದಂಡಿನವರ ಗುಂಡಿ ಎಂದು ಹೆಸರು ಬಂತೆಂದು ಹೇಳಲಾಗುತ್ತಿತ್ತು. ಹಡ್ಲು ಎಂದರೆ ಕೇವಲ ರಾಸುಗಳು ಮೇಯಲು ಮೀಸಲಾಗಿಟ್ಟಿರುವ ಹುಲ್ಲಿಗಾವಲು. ಅಲ್ಲಿ ಉಳಿಮೆ ಮಾಡುವುದಿಲ್ಲ. ಬರೀ ಹುಲ್ಲು ಬೆಳೆಯಲು ಬಿಡಲಾಗುತ್ತದೆ. ಪ್ರತಿದಿನ ಮನೆಯ ಎಲ್ಲಾ ರಾಸುಗಳನ್ನು ಹೊಡೆದುಕೊಂಡು ಅಲ್ಲಿಗೆ ಹೋಗಲಾಗುತ್ತಿತ್ತು. ಅಲ್ಲಿಗೆ ಹೋದರೆ ನಮ್ಮ ಮನೆಯ ಎಲ್ಲಾ ಆಳುಗಳು ಅಲ್ಲಿ ಏಕ ಕಾಲಕ್ಕೆ ಸಿಕ್ಕುತ್ತಿದ್ದರು. ಕುರಿ ಕಾಯುವ ರಾಮ, ಹನುಮಂತ, ದನ ನೋಡಿಕೊಳ್ಳುವ ಕುಂಬಿ, ಹನುಮನರಸ, ತೋಟದ ಹನುಮ, ಚೌಡ, ಅಡಿಕೆ ತೋಟ, ಮಾವಿನ ತೋಟ ನೋಡಿಕೊಳ್ಳುವ ದೊಂಬರ ಗುಗ್ಗ, ಭೋಗ, ಚೆಲುವ, ಹಿಪ್ಪೆ ತೋಪಿನ ಕಡೆ, ಹೊಂಗೆ ತೋಪು, ಹುಣಸೆ ತೋಪು, ಸೀಗೆ ತೋಪು, ಗದ್ದೆ, ಹೊರ ಊರಿನ ಹೊಲಗಳ ಉಸ್ತುವಾರಿ ನೋಡಿಕೊಳ್ಳುವ ಕೆಂಚ ನಾಯಕ, ಸಿದ್ದನರಸ, ತಳವಾರ ನರಸಿಂಹ, ಯಳವಣ್ಣ, ಸಿದ್ದಲಿಂಗ, ಜಯಣ್ಣ, ಗಂಗರಾಮಣ್ಣ, ಚಿಕ್ಕ ಹನುಮಯ್ಯ, ಒಡಾರಯ್ಯ ಹೀಗೆ ಎಲ್ಲರೂ ಅಲ್ಲಿರುತ್ತಿದ್ದರು. ಪ್ರತಿಯೊಬ್ಬರೂ ಅಲ್ಲಿಗೆ ಬಂದೇ ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಿದ್ದರು. 7 ಗಂಟೆಗೆಲ್ಲಾ ನಮ್ಮ ಮನೆಯ ಜಗುಲಿ ಮೇಲೆ ಕುಳಿತುಕೊಳ್ಳುತ್ತಿದ್ದ ನಮ್ಮಪ್ಪ, ಯಾರು ಎಲ್ಲಿಗೆ ಹೋಗಬೇಕು, ಯಾರು ಯಾವುದರ ಉಸ್ತುವಾರಿಗೆ ಹೋಗಬೇಕು, ಊಟ ಯಾರು ಹೊತ್ತುಕೊಂಡು ಹೋಗಬೇಕು. ಹೀಗೆ ಎಲ್ಲವನ್ನೂ ನಿರ್ಧರಿಸಿಬಿಡುತ್ತಿದ್ದರು. ನಮ್ಮಣ್ಣ, ಅಕ್ಕಂದಿರು ಆಳುಗಳನ್ನು ಕರೆದುಕೊಂಡು ಬರುವುದರಿಂದ ಹಿಡಿದು, ಲೆಕ್ಕ ಬರೆದುಕೊಳ್ಳುವುದು ಇವೆಲ್ಲವನ್ನೂ ನಿಭಾಯಿಸುತ್ತಿದ್ದರು. ಅಮ್ಮ ಮಾತ್ರ ಎಂದಿನಂತೆ ಪ್ರತಿದಿನ ಕನಿಷ್ಠ 100 ಜನರಿಗೆ ಅಡುಗೆ ಮಾಡಿಹಾಕುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ 5 ಗಂಟೆಗೆ ಹೊಲೆ ಹೊತ್ತಿಸಿದರೆಂದರೆ ಆರಿಸುತ್ತಿದ್ದು ಇನ್ನು ರಾತ್ರಿ 12 ಗಂಟೆಗೆ. ನಾವು ಐದು ಮಂದಿ, ನಮ್ಮ ದೊಡ್ಡಮ್ಮನ ಮಕ್ಕಳು ಐದು ಮಂದಿ, ನಮ್ಮ ತಂದೆ ಅಣ್ಣ, ಅವರ 10 ಮಂದಿ ಮಕ್ಕಳು, ಅವರ ತಮ್ಮ, ಅವರ 8 ಮಂದಿ ಮಕ್ಕಳು, ಒಂದಷ್ಟು ಮಂದಿ ಮೊಮ್ಮಕ್ಕಳು, ಒಂದಷ್ಟು ಮಂದಿ ನೆಂಟರು, ಮನೆಯಲ್ಲೇ ಇರುತ್ತಿದ್ದ ಒಂದು 10 ಮಂದಿ ಆಳುಗಳು… ಹೀಗೆ ಪ್ರತಿದಿನ ಅಡುಗೆ ಮಾಡುವುದು ಅಮ್ಮನ ಕೆಲಸವಾಗಿತ್ತು. ಈಗಿನಂತೆ ಆಗ ಗ್ಯಾಸ್, ಕರೆಂಟ್ ಒಲೆ ಇರಲಿಲ್ಲ. ನೀರು ಮನೆ ಒಳಗೆ ಬರುತ್ತಿರಲಿಲ್ಲ. ಊರ ಹೊರಗಿನ ಬಾವಿಯಿಂದ ನೀರು ಸೇದಿಕೊಂಡು ಬರಬೇಕಾಗಿತ್ತು. ಒಲೆ ಉರಿಸಲು ಪ್ರತಿದಿನ ಕಟ್ಟಿಗೆ ಬೇಕಾಗಿತ್ತು. ಒಮ್ಮೊಮ್ಮೆ ಒಣಗಿದ ಕಟ್ಟಿಗೆ ಇರಲಿಲ್ಲ ಎಂದರೆ ಮನೆಯೆಲ್ಲಾ ಹೊಗೆ ತುಂಬಿಕೊಳ್ಳುತ್ತಿತ್ತು. ಊದು ಕೊಳವೆಯಲ್ಲಿ ಹೊಲೆ ಊದಿ ಊದಿ ಕಣ್ಣೀರು ಬರುತ್ತಿದ್ದವು. ಹಿರಿ ಸೊಸೆಯನ್ನು ಬಿಟ್ಟರೆ ಬೇರೆ ಇನ್ಯಾವುದೇ ಸೊಸೆಯರು ಅಡುಗೆ ಮನೆಗೆ ಕಾಲಿಡುತ್ತಿರಲಿಲ್ಲ. ಅಡುಗೆ ಮಾಡಿಟ್ಟಾಕ್ಷಣ ತಮ್ಮ ಗಂಡ ಮಕ್ಕಳಿಗೆ ಬಡಿಸುವ ಸಲುವಾಗಿ ಎಷ್ಟು ಬೇಕೊ ಅಷ್ಟನ್ನು ಎತ್ತಿಕೊಂಡು ತಮ್ಮ, ತಮ್ಮ ರೋಮು ಸೇರಿಬಿಡುತ್ತಿದ್ದರು…..

ಎಮ್ಮೆ, ಹಸುಗಳ ಜತೆ ಅಷ್ಟೊಂದು ಸ್ನೇಹದಿಂದ ಇರುತ್ತಿದ್ದ ಪಾರ್ವತಿ ಹಡ್ಲಿಗೆ ಹೋದಳೆಂದರೆ ಮಹಾಮಾರಿಯಾಗಿರುತ್ತಿದ್ದಳು. ಅಲ್ಲಿಗೆ ಹೋಗುತ್ತಿದ್ದ ಎಲ್ಲಾ ಆಳುಕಾಳುಗಳು ಪಾರ್ವತಿಯನ್ನು ಕಂಡರೆ ಹೆದರುತ್ತಿದ್ದರು. ಅವಳ ಎಮ್ಮೆ ತಂಟೆಗಾಗಲಿ ಅವಳ ತಂಟೆಗಾಗಲಿ ಹೋಗುತ್ತಿರಲಿಲ್ಲ. ಮೇಯುವ ಎಮ್ಮೆಗಳನ್ನು ಯಾರಾದರೂ ಚದುರಿಸಿದರೆ ಅಲ್ಲೆ ಇರುತ್ತಿದ್ದ ಎಕ್ಕದ ಗಿಡದ ಕಡ್ಡಿ ಮುರಿದುಕೊಂಡು ಪಾರ್ವತಿ ಬಿಟ್ಟಳೆಂದರೆ ಬರೆ ಬರುತ್ತಿದ್ದವು. ಅಷ್ಟೆ ಅಲ್ಲಾ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಕಾಡೆ ಹಾಕಿ ಮಣ್ಣಾಕ ಎಂಬುದರಿಂದ ಹಿಡಿದು ಬೋಳಿಮಗ, ಸೂಳೆ ಮಗ, ಹಾವುಕಡಿಯ, ರಕ್ತಕಕ್ಕ, ಮನೆಗೆ ಮುಳ್ಳಾಕ……….ಹೀಗೆ ನೂರಾರು ಬೈಗುಳಗಳು….ಅವಳ ಬಾಯಲ್ಲಿ. ಅಂಥ ದೊಡ್ಡ ನಿಂಘಟು ಅವಳ ನಾಲಿಗೆ ಮೇಲೆ ! ಒಮ್ಮೆ ಅವಳ ಬಾಯಿಗೆ ಸಿಕ್ಕರೆ ಮುಗಿಯಿತು. ಇಡೀ ದಿನ ಅವಳ ಶಾಪಕ್ಕೆ ಗುರಿಯಾಗಬೇಕಾಗಿತ್ತು. ಹಡ್ಲಿನಿಂದ ಮನೆಗೆ ಬರುವವರೆಗೂ ಒಮ್ಮೊಮ್ಮೆ ರಾತ್ರಿಯೆಲ್ಲಾ ಪಾರ್ವತಿ ಶಾಪಹಾಕುತ್ತಿದ್ದಳು….ಆ ಬೈಗುಳಗಳು ಯಾವುದೇ ನಿಂಘಟಿನಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಎಲ್ಲಾ ಅಂಥಹ ಅದ್ಭುತ ಬೈಗುಳಗಳು ! ಎಲ್ಲವೂ ಶಾಪದ ಸ್ವರೂಪದಲ್ಲೇ ಇರುತ್ತಿದ್ದವು……ಬರೀ ಆಳುಕಾಳುಗಳೇನು ಊರಿನವರು, ಸುತ್ತಮುತ್ತಲ ಊರಿನ ಜನ ಸಹ ಪಾರ್ವತಿ ಕಂಡರೆ ಹೆದರುತ್ತಿದ್ದರು……ಅವಳ ಬೈಗುಳ, ಜತೆಗೆ ಶಾಪ…….
ಪಾರ್ವತಿಗೆ ಮದುವೆಯಾಗಿತ್ತಂತೆ, ಗಂಡ ಚಿಕ್ಕವಯಸ್ಸಿಗೆ ತೀರಿಕೊಂಡಿದ್ದಾನೆ…..ಮಕ್ಕಳಿರಲಿಲ್ಲ. ಇಂಥಹ ಸಂದರ್ಭದಲ್ಲಿ ಪಕ್ಕದ ಕೋಳಿಹಳ್ಳಿಯಿಂದ ನಮ್ಮ ಮನೆಗೆ ವಲಸೆ ಬಂದಿದ್ದಾಳೆ. ನಂತರ ಆಕೆ ಅವಳ ತವರಿಗೆ ಹೋಗುತ್ತಿದ್ದುದು ವರ್ಷಕ್ಕೆ ಒಮ್ಮೆ ಮಾತ್ರ. ಯಾವುದೋ ಹಬ್ಬದ ಸಂದರ್ಭದಲ್ಲಿ ಬೆಳಿಗ್ಗೆ ಹೋಗಿ ಸಂಜೆ ಬಂದುಬಿಡುತ್ತಿದ್ದಳು…..ಹಬ್ಬಕ್ಕೆ ಹೋಗುವ ವಾರದ ಮೊದಲೇ ತನ್ನೆಲ್ಲಾ ಎಮ್ಮೆಗಳಿಗೆ ಅವಳು ನಾನು ಹಬ್ಬಕ್ಕೆ ಹೋಗುತ್ತೇನೆ. ಆಯಿತವಾರ ನಾನಿರುವುದಿಲ್ಲ. ನೀವು ಗಿರಮಕ್ಕಯ್ಯನಿಗೆ ಹಾಲು ಕೊಡಿ ಹೀಗೆ ಮಾತನಾಡುತ್ತಲೇ ಇರುತ್ತಿದ್ದಳು. ನಮ್ಮ ತುಂಬು ಕುಟುಂಬ ಅವಳ ಮಾತುಗಳಿಗೆ ಹೊಗ್ಗಿಹೋಗಿತ್ತು. ಅವಳು ಗೌರವ ಕೊಡುತ್ತಿದ್ದುದು ನಮ್ಮ ತಂದೆಗೆ ಮಾತ್ರ. ದೊಡ್ಡಪ್ಪ ಇಲ್ಲಿ ನೋಡೊ… ಇದು ಹೀಗಾಗಿದೆ. ಈ ಎಮ್ಮೆಗೆ ಅದಾಗಿದೆ, ಇದಾಗಿದೆ, ವಯಸ್ಸಾಗಿದೆ…..ಲಕ್ಕುರ್ ಸಾಬರಿಗೆ ಹೇಳಿಕಳುಹಿಸಬೇಕು….ಹೀಗೆ ಸಾಗುತ್ತಿತ್ತು ಅವಳ ನಮ್ಮ ತಂದೆ ಸಂಭಾಷಣೆ…………ಎಲ್ಲರನ್ನೂ ಬಾಯಿಗೆ ಬಂದಂತೆ ಬೈಯುತ್ತಾ ಮಾತೆತ್ತಿದರೆ ನಿಮ್ಮಮ್ಮನ್, ಅಕ್ಕನ್…….ಎನ್ನುತ್ತಾ ಕೆಕ್ಕರಿಕೆ ಕಣ್ಣು ಬಿಡುತ್ತಿದ್ದ ಗಿರಿಜಾ ಮೀಸೆ ನರಸೇಗೌಡರು, ಪಾರ್ವತಿಯನ್ನು ಗದರಿಸಿದ್ದನ್ನೂ ಯಾರೂ ನೋಡಿಯೇ ಇರಲಿಲ್ಲಾ ……….ಒಂದೇ ಒಂದು ಬೈಗಳ ಅವಳ ವಿರುದ್ಧ ಆಡಿದ್ದಿಲ್ಲ. ಏಕೆಂದರೆ ಅಷ್ಟೊಂದು ಸ್ವಾಮಿನಿಷ್ಠೆ ಇತ್ತು ಅವಳಿಗೆ. ನಮ್ಮ ಮನೆಯಲ್ಲಿ ಅಳಿದುಳಿದಿದ್ದನ್ನು ಎಲ್ಲವನ್ನೂ ಅವಳು ತಿನ್ನಿತ್ತಿದ್ದಳು. ತಯಾರಿಗೂ ಬೇಡದ್ದು ಪಾರ್ವತಿಗೆ ಮೀಸಲಾಗಿರುತ್ತಿತ್ತು.
ಬದುಕು ಹೀಗೆ ಸಾಗಿದ್ದಾಗಲೇ ನಮ್ಮ ತಂದೆ, ಅವರ ಅಣ್ಣ, ತಮ್ಮಂದಿರಿಗೆ ಭಾಗ ಮಾಡಿಕೊಟ್ಟರು. ಎಲ್ಲಾ ಆಸ್ತಿಯನ್ನು ವಿಭಾಗ ಮಾಡಲು ತಿಂಗಳುಗಟ್ಟಲೆ ಹಿಡಿಯಿತು. ಮೋಜಿಣಿದಾರರು ಊರಿನಲ್ಲಿ ತಿಂಗಳುಗಟ್ಟಲೇ ಠಿಕಾಣಿ ಹೂಡಿ ಕಡೆಗೂ ಭಾಗ ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಬಗೆಯಬಾರದು ಎನ್ನುತ್ತಲೇ ಇದ್ದ ನಮ್ಮ ತಂದೆ ಪ್ರತಿಯೊಂದನ್ನು ಅಣ್ಣ ತಮ್ಮಂದಿರಿಗೆ ಹಂಚಿದರು. ಬೆಂಗಳೂರು, ತುಮಕೂರು, ಅಕ್ಕ ಪಕ್ಕದ ಹತ್ತಾರು ಹಳ್ಳಿಗಳಲ್ಲಿದ್ದ ಹೊಲ, ತೋಟ, ಮನೆ, ಸೈಟುಗಳು, ಊರಿನ ಮುಂಭಾಗದ ಜಮೀನು, ಹಡ್ಲು, ನೊಗ, ಗಾಡಿ, ಕಣ, ಕಣಜ, ಕಣದ ಗುಂಡು, ಹಲುಬೆ, ವಾಡೆ, ಮಡಕೆ, ಹಾರೆ, ಪೊರಕೆ, ಹಳೇ ಕಾಲದ ಭಜರ್ಿ ಬೆತ್ತ, ಕುಚರ್ಿ, ಮೇಜು, ಪೆಟ್ಟಿಗೆ, ಮಾವು, ಆಲ, ಹೊಂಗೆ, ಶೀಗೆ ಮರಗಳು ಹೀಗೆ ಎಲ್ಲವೂ ಮೂರು ಭಾಗವಾಗಿ ಹೋದವು. ಕಡೆಗೆ ದನ ಎಮ್ಮೆ ಕರುಗಳನ್ನು ಹಂಚಲಾಯಿತು. ಪಾರ್ವತಿ ಮಾತ್ರ ನನ್ನ ತಿಪ್ಪೆ ಯಾರಿಗೂ ಕೊಡುವುದಿಲ್ಲ ಎಂದು ಹಠಕ್ಕೆ ಬಿದ್ದಳು. ನಾನು ತುಂಬಿದ ತಿಪ್ಪೆ ಸಗಣಿ ನಮ್ಮಣ್ಣಯ್ಯನಿಗೆ ಮಾತ್ರ ಎಂದು ಜೋರು ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಸಲ್ಲದು ಎಂಬ ಸೂತ್ರಕ್ಕೆ ತಲೆಬಾಗಿದ್ದ ನಮ್ಮ ತಂದೆ ಕಡೆಗೂ ತಿಪ್ಪೆಯನ್ನೂ ಬಿಡದೆ ಹಂಚಿಬಿಟ್ಟರು. ಯಾರಿಗೂ ಹೆದರದ ನಮ್ಮ ತಂದೆ ಪಾರ್ವತಿಯನ್ನು ಅಂದು ಗದರಿಸಲಿಲ್ಲ. ಯಾರನ್ನೂ ಬೈಯ್ಯದೆ ಬಿಡದ ಪಾರ್ವತಿ ತಿಪ್ಪೆ ಹಂಚಿದರೂ ನಮ್ಮ ತಂದೆಯ ಮೇಲೆ ಹರಿಆಯಲಿಲ್ಲ. ನಮ್ಮ ತಾಯಿ ಹಾಗೂ ಅವರಿಬ್ಬರ ಕಣ್ಣಲ್ಲಿ ಮಾತ್ರ ಕಣ್ಣೀರಿತ್ತು. ಮನೆಯಲ್ಲಿದ್ದ ಧವಸ ಧಾನ್ಯ ಹಂಚುವಾಗಲಂತೂ ನಾವೆಲ್ಲಾ ಅಮ್ಮನ ಜತೆ ಕಣ್ಣೀರಾಕಿದೆವು.
ಎಲ್ಲಾ ಹಂಚಿದ ಮೇಲೆ ತಿಪ್ಪೆಯಲ್ಲಿದ್ದ ಗೊಬ್ಬರ ತುಂಬಿಕೊಳ್ಳಲು ನಮ್ಮ ತಂದೆ ಅಣ್ಣನ ಮೊಮ್ಮಗ ರಾಜ ಗಾಡಿ ಕಟ್ಟಿಕೊಂಡು ಆಳುಗಳ ಜತೆ ಹೋಗಿದ್ದ. ತಿಪ್ಪೆ, ಸಗಣಿ, ಗೊಬ್ಬರ ಎಮ್ಮೆ ಕರುಗಳ ಜತೆ ಅವಿನಾಭಾವ ಹೊಂದಿದ್ದ ಪಾರ್ವತಿ, ಅವನೊಂದಿಗೆ ಜಗಳಕ್ಕೆ ಬಿದ್ದು ಸಗಣಿ ಮುಟ್ಟದಂತೆ ತಾಕೀತು ಮಾಡಿ ಅವನ ಗಾಡಿ ತಡೆದಿದ್ದಳು. ಅವಳನ್ನು ಸಮಾಧಾನಪಡಿಸಿ ಕರೆದುಕೊಂಡು ಬರಲು ಅಮ್ಮ ಹೋಗುವಷ್ಟರಲ್ಲೇ ಪಾಪಿ, ರಾಜ ಗಾಡಿ ಹೊಡೆಯಲು ಬಳಸುತ್ತಿದ್ದ ಬಾರುಗೋಲು ತೆಗೆದುಕೊಂಡು ಹಿಗ್ಗಾಮಗ್ಗ ಪಾರ್ವತಿಯನ್ನು ಥಳಿಸಿಬಿಟ್ಟಿದ್ದ. ಆಕೆ ಅಲ್ಲೇ ಉಚ್ಚೆ ಕಕ್ಕಸ್ಸು ಮಾಡಿಕೊಂಡು ಕುಸಿದುಬಿದ್ದಿದ್ದಳು. ಅಯ್ಯೋ ಅಣ್ಣಯ್ಯ, ಅಕ್ಕಯ್ಯ, ಸಗಣಿ ತಗೆದುಕೊಂಡು ಹೋಗುತ್ತಿದ್ದಾನೆ ನೋಡೆ ಎಂದು ಶಾಪ ಹಾಕಿ ಗೋಳಿಡುತ್ತಿದ್ದಳು……ಅಮ್ಮ ಅವಳನ್ನು ಎತ್ತಿಕೊಂಡು ಬಂದು ಸ್ನಾನ ಮಾಡಿಸಿ, ಬಾಸುಂಡೆಗಳಿಗೆ ಮುಲಾಮು ಹಚ್ಚಿ  ಸಾಂತ್ವಾನ ಮಾಡಿದರು. ರಾಜನ ನಿರ್ದಯಿ ಹೊಡತಗಳಿಗೆ ಸಿಕ್ಕಿ ಶಾಕ್ಗೆ ಒಳಗಾಗಿದ್ದ ಪಾರ್ವತಿ ರಾತಿಯಿಡೀ ಕೊರಗುತ್ತಿದ್ದಳು. ತಿಪ್ಪೆ ತುಂಬಿಕೊಂಡು ಹೋದ ನಂತರ ಆಗಾಗ್ಗೆ ತಿಪ್ಪೆ ಕಡೆಗೆ ಹೋಗಿ ನೋಡಿಕೊಂಡು ಬಂದು ಹಿಡಿ ಶಾಪ ಹಾಕಿ ಬಂದು ಮಲಗುತ್ತಿದ್ದಳು. ಅದೊಂದು ದಿನ ಬೆಳಿಗ್ಗೆ ಅಮ್ಮನನ್ನು ಕರೆದು ಅಕ್ಕಯ್ಯ ಈ ಗಂಟನ್ನು ಇಟ್ಟುಕೋ ಎಂದು ಹಳೆ ಬಟ್ಟೆಯ ಗಂಟನ್ನು ಕೊಟ್ಟಿದ್ದಳು. ಅಮ್ಮ ಹಳೇ ಬಟ್ಟೆ ಗಂಟೆದು ಅಲ್ಲೆಲ್ಲೊ ಇಟ್ಟಿದ್ದರು. ಇದಾದ ಒಂದೆರಡು ದಿನದ ಬೆಳಗಿನ ಜಾವದಲ್ಲಿ   ಪಾರ್ವತಿ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಬಿಟ್ಟಳು, ಅವಳ ಮೂಗಕರ್ಿ ಎಮ್ಮೆ, ಕರುಗಳು, ಆ ದಿನ ಕೊಟ್ಟಿಗೆಯಲ್ಲೇ ಹೂಂಕರಿಸಿ ಗೀಳಿಡುತ್ತಿದ್ದವು…..ಅವುಗಳ ಗಂಜಲ ಎತ್ತುವವರು,….ಅವುಗಳನ್ನು ಕೊಟ್ಟಿಗೆಯಿಂದ ಹೊರಗೆ ಕಟ್ಟುವವರು ಯಾರೂ ಇರಲಿಲ್ಲ. ಎಲ್ಲರೂ ಪಾರ್ವತಿ ಶವ ಸಂಸ್ಕಾರಲ್ಲಿ ಬಿಸಿಯಾಗಿದ್ದರು…………….
ಪಾರ್ವತಿ ನೀಡಿದ್ದ ಹಳೆಯ ಬಟ್ಟೆ ಗಂಟನ್ನು ಅವಳ ಊರಿನಿಂದ ಬಂದಿದ್ದ ಅವಳ ಸಂಬಂಧಿಕರಿಗೆ ಅಮ್ಮ ಕೊಟ್ಟರು. ಅವರು ಗಂಟು ಬಿಚ್ಚಿ ನೋಡಿದಾಗ ಪಕ್ಕದ ಊರಿನ ಎಮ್ಮೆ ಗಳಿಗೆ ಕೋಣ ಹತ್ತಿಸಿ ಪಡೆಯುತ್ತಿದ್ದ ಐದು ರುಪಾಯಿಗಳ ನೋಟುಗಳ ಒಂದು ಕಂತೆ ನೋಟುಗಳು, ಪೆನ್ಷನ್ ನಿಂದ ಬರುತ್ತಿದ್ದ ಹತ್ತು ರುಪಾಯಿಗಳ ಜೋಡಿಸಿಟ್ಟ ಮತ್ತೊಂದು ಕಂತೆ ಅಲ್ಲಿದ್ದವಂತೆ. ಅದನ್ನು ನೀವೆ ಇಟ್ಟುಕೊಳ್ಳಿ ಎಂದು ಅಮ್ಮ ಅವರ ಸಂಬಂಧಿಕರಿಗೆ ಹೇಳಿ ಕಳುಹಿಸಿದರು.
ಇದಾದ ಹಲವು ವರ್ಷಗಳ ಬಳಿಕ ಪಾರ್ವತಿ ಶವವನ್ನು ಹೂತಿದ್ದ ಗುಂಡಿ ಎಲ್ಲಿದೆ ಎಂದು ಅಮ್ಮನನ್ನು ಪ್ರಶ್ನಿಸಿದೆ, ನಿಮ್ಮಣ್ಣ ಮಾವಿನ ತೋಟದ ಮರಗಳನ್ನು ತೆಗೆಸಿ ಹೊಟೇಲ್ ಕಟ್ಟಿಸಿದ್ದಾನಪ್ಪ. ಪಾರ್ವತಿ ಗುಂಡಿ ಆ ಹೊಟೇಲ್ನ ಅಡಿಯಲ್ಲಿ ಸೇರಿಹೋಗಿದೆ ಎಂದೆ. ಪಾರ್ವತಿ ಬಗ್ಗೆ ನಮ್ಮ ಅಕ್ಕಂದಿರನ್ನು ಅವಳ ಬಗ್ಗೆ ಬರೆಯಬೇಕು ಸ್ವಲ್ಪ ವಿವರಗಳಿದ್ದರೆ ಹೇಳಿ ಎಂದಿದ್ದಕ್ಕೆ ಅವರೆಲ್ಲರ ಕಣ್ಣಲ್ಲಿ ನೀರು ತುಂಬಿತ್ತಷ್ಟೇ. ಅವಳೊಬ್ಬಳು ದೊಡ್ಡ ಗುಣದ ಹೆಣ್ಣೆಂದರು….ಕಣ್ಣೀರು ತುಂಬಿ ಬಂತು ಆಕೆ ನಮ್ಮಮ್ಮನಿಗಿಂತ ಮಿಗಿಲಾಗಿದ್ದಳು………ಅವಳ ಒಂದೇ ಒಂದು ಫೋಟೋಗಾಗಿ ಹುಡುಕಾಟ ನಡೆಸಿದೆ ಅದೆಲ್ಲೂ ಸಿಗಲಿಲ್ಲ.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

 • ಪುಟಗಳು

 • Flickr Photos

 • ಮೇ 2012
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಏಪ್ರಿಲ್   ಮಾರ್ಚ್ »
   12345
  6789101112
  13141516171819
  20212223242526
  2728293031  
 • ವಿಭಾಗಗಳು