ರಾಜ್ಯ ಬಿಜೆಪಿ ಅನಧಿಕೃತವಾಗಿ ಹೋಳಾಗಿದೆ. ಆ ಪಕ್ಷದ ವರಿಷ್ಠರೇ ಆ ಪಕ್ಷವನ್ನು ಹೋಳಾಗುವಂತೆ ನೋಡಿಕೊಂಡಿದ್ದಾರೆ. ಇನ್ನು ಮುಂದೆ ಬಿಜೆಪಿ ಎರಡು ಬಣಗಳು ಪರಸ್ಪರ ಕಾಲುಎಳೆಯುವುದರಲ್ಲೇ ನಿರತವಾಗಲಿವೆ. ಮುಂದಿನ ಚುನಾವಣೆಯಲ್ಲಿ ಎರಡು ಗುಂಪುಗಳು, ಪರಸ್ಪರ ತಮ್ಮ ವಿರೋಧಿ ಬಣದವರನ್ನು ಮಣಿಸಲು ತೆರೆಮರೆಯತ್ನ ನಡೆಸಲಿದ್ದಾರೆ. ಇದನ್ನೇ ಜೆಡಿಎಸ್, ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಮಾಡಿಕೊಂಡು ಬಂದಿದ್ದರು. ಈಗ ಬಿಜೆಪಿ ಸರದಿ. ಪ್ರತಿಪಕ್ಷದವರು ಇನ್ನು ಮುಂದೆ ಬಿಜೆಪಿ ನಾಯಕರನ್ನು ಸೋಲಿಸಬೇಕಾಗಿಲ್ಲ. ಅವರ ಪಕ್ಷದವರೇ ಪರಸ್ಪರ ಸೋಲಿಸುವ ಕೆಲಸವನ್ನು (ಎಲ್ಲ ರೀತಿಯಲ್ಲಿ) ಮಾಡಿಕೊಳ್ಳುತ್ತಾರೆ. ಹಿಂದೆ ಬಂಗಾರಪ್ಪ, ಎಸ್ಎಂ ಕೃಷ್ಣ, ಮೊಯ್ಲಿ ಜಗಳ ಕಾಂಗ್ರೆಸ್ಗೆ ಸೋಲಿನ ರುಚಿ ಉಣ್ಣಿಸಿತ್ತು. ಬಳಿಕ ದೇವೇಗೌಡ, ಹೆಗಡೆ, ಪಟೇಲ್, ಬೊಮ್ಮಾಯಿ, ಸಿದ್ದು ಜಗಳ ಆ ಪಕ್ಷ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಸದ್ಯಕ್ಕೆ ಕಾಂಗ್ರೆಸ್, ಜೆಡಿಎಸ್ನ ಅರ್ಧ ಕೆಲಸ ಮುಗಿದಿದೆ. ಉಳಿದಿರುವುದು ಸುಮ್ಮನೆ ಪ್ರತಿಪಕ್ಷದಲ್ಲಿ ಕುಳಿತು ಆಡಳಿತ ಪಕ್ಷದ ಕಚ್ಚಾಟ ನೋಡುವುದೊಂದೇ ಬಾಕಿ. ಒಟ್ಟಿನಲ್ಲಿ ಬಿಜೆಪಿ ಬೆಳವಣಿಗೆ ಜೆಡಿಎಸ್- ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಖುಷಿಪಡುವಂತೆ ಮಾಡಿದೆ.