ಸಾರ್ವಜನಿಕ ಹಿತಾಸಕ್ತಿ ಇಲ್ಲದ ವಿಷಯಗಳನ್ನು ಬ್ರೇಕಿಂಗ್ ಮಾಡುತ್ತಲೇ ಇರುತ್ತಾರೆ…..ಅದು ಸುದ್ದಿನಾ? ಬ್ರೇಕಿಂಗ್ ? ಫ್ಲಾಷ್ ನ್ಯೂಸಾ ಅನ್ನುವುದೇ ಗೊತ್ತಿರುವುದಿಲ್ಲ


ಬ್ರೇಕಿಂಗ್ ನ್ಯೂಸ್ ಹಾಗೂ ಫ್ಲ್ಯಾಷ್ ನ್ಯೂಸ್ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವವರು ಆಯಾ ವಿಭಾಗಗಳ ಮುಖ್ಯಸ್ಥರಾಗಿರುವುದರಿಂದಲೇ ಇಂಥಹ ಪ್ರಮಾದಗಳಾಗುತ್ತವೆ. ಸುದ್ದಿಗೆ ಬರ ಅಂಥ ಮುಖ್ಯಸ್ಥರು ಭಾವಿಸುತ್ತಾರೆ. ಆದ್ದರಿಂದಲೇ ಯಡಿಯೂರಪ್ಪ ಪೂಜೆ ಮಾಡಿದ್ದು ಬ್ರೇಕಿಂಗ್ ಆಗುತ್ತದೆ. ಸುದ್ದಿ ಸ್ಫೋಟ ಆಗುತ್ತದೆ. ಸಮೂಹ ಮಾಧ್ಯಮದ ಶಕ್ತಿ ಗೊತ್ತಿಲ್ಲದೇ ಇರುವವರು ನ್ಯೂಸ್ ಛಾನೆಲ್ಗಳಲ್ಲಿ ಹೆಚ್ಚು ಮಂದಿ ಇರುವುದರಿಂಲೇ ಇಂಥಹ ಸುದ್ದಿಗಳನ್ನು ಜನ ಕೇಳಬೇಕಾಗುತ್ತದೆ ಜತೆಗೆ ನೋಡಬೇಕಾಗುತ್ತದೆ. ಯಾವುದು ಸುದ್ದಿ ಅಂಥ ತಿಳಿದುಕೊಳ್ಳಬೇಕಾದರೆ ವರ್ಷಗಟ್ಟಲೆ ಹಿಡಿಯುತ್ತದೆ. ಕಾರಣ ಬಹುತೇಕ ಟಿವಿ ಚಾನೆಲ್ಗಳ ಸುದ್ದಿ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ವರದಿಗಾರರು ಹಾಗೂ ಸಂಪಾದಕೀಯ ವಿಭಾಗದವರಿಗೆ ಒಂದು ಬೇಸಿಕ್ ತರಬೇತಿ ಆಗಿರುವುದಿಲ್ಲ. ಬಹುತೇಕ ಎಲ್ಲಾ ನ್ಯೂಸ್ ಪೇಪರ್ಗಳ ಸಂಪಾದಕರು ಹಾಗೂ ನ್ಯೂಸ್ ಚಾನೆಲ್ಗಳ ಮುಖ್ಯಸ್ಥರು ಮೂಲಭೂತ ವರದಿಗಾರರಾಗಿ ಮೇಲಕ್ಕೆ ಏರಿದ್ದರೆ ಅಥವಾ ಆ ಸ್ಥಾನಕ್ಕೆ ನೇಮಕಗೊಂಡರೆ ಇಂಥಹ ಪ್ರಮಾದಗಳಾಗುವುದನ್ನು ತಡೆಯಬಹುದು. ಆದರೆ ಈಗೆಲ್ಲಾ ಹೈಬ್ರಿಡ್ ಸಂಪಾದಕರೇ. ರಾತ್ರೋರಾತ್ರಿ ಸುದ್ದಿ ಸಂಸ್ಥೆಗಳ ಮುಖ್ಯಸ್ಥರಾಗುತ್ತಾರೆ. ಅಂಥವರಿಗೆ ಸಂಪಾದಕೀಯ ವಿಭಾಗವನ್ನು ಹೇಗೆ ದುಡಿಸಿಕೊಳ್ಳಬೇಕು? ವರದಿಗಾರರ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದೇ ಗೊತ್ತಿರುವುದಿಲ್ಲ. ಆದ್ದರಿಂದಲೇ ಜಾಳು ಜಾಳಾದ   ಹಳಸು ಸುದ್ದಿಗಳನ್ನು, ಸಾರ್ವಜನಿಕ ಹಿತಾಸಕ್ತಿ ಇಲ್ಲದ ವಿಷಯಗಳನ್ನು ಬ್ರೇಕಿಂಗ್ ಮಾಡುತ್ತಲೇ ಇರುತ್ತಾರೆ. ಏಕೆಂದರೆ ಸುದ್ದಿಕೊಡುವವನಿಗೂ ಹಾಕುವವರಿಗೂ ಅದು ಸುದ್ದಿನಾ? ಬ್ರೇಕಿಂಗ್ ಆಗಬಹುದಾ? ಫ್ಲಾಷ್ ನ್ಯೂಸಾ ಅನ್ನುವುದೇ ಗೊತ್ತಿರುವುದಿಲ್ಲ. ಇದರಿಂದ ಬ್ರೇಕಿಂಗ್ ನ್ಯೂಸ್ಗಳ ಹಾವಳಿ ಹೆಚ್ಚಾಗಿದೆ.
ಕನರ್ಾಟಕದ ಟೆಲಿವಿಷನ್ ಇತಿಹಾಸ ಹೆಚ್ಚೆಂದರೆ ಹದಿನೈದು ವರ್ಷದ್ದು. ರಾಮೋಜಿರಾವ್ ಈಟಿವಿ ಶುರುವಾದಾಗ ರಾಮೋಜಿಫಿಲಂ ಸಿಟಿಯಲ್ಲಿ ಕೊಡಿಸಿದ 26 ದಿನಗಳ ತರಬೇತಿಯೇ ರಾಜ್ಯದ ಟೆಲಿವಿಷನ್ ಇತಿಹಾಸದಲ್ಲಿಯೇ ಮೊದಲಿನದು. ಅಲ್ಲಿಯವರೆಗೆ ಇದ್ದ ಉದಯ, ಕಾವೇರಿ ಹಾಗೂ ಸುಪ್ರಭಾತ ಮಾಧ್ಯಮ ಸದಸ್ಯರಿಗೆ ಅಂಥಹ ಟೆಕ್ನಿಕಲ್ ತರಬೇತಿ ಆಗಿರಲಿಲ್ಲ. ಜತೆಗೆ ಸಿಕ್ಕಿದ್ದರೂ ನುರಿತವರಿಂದ ದೊರಕಿದ್ದಲ್ಲ. ಇದು ಬೇಸಿಕ್ ಅಥವಾ ಮೂಲಭೂತ ನ್ಯೂನತೆ. ನಾನು ಹೇಳಿದಂತೆ ನಾವೆಲ್ಲಾ ಈಟಿವಿ ಸೇರಲು ಹೈದ್ರಾಬಾದ್ಗೆ ಹೊರಟು ನಿಂತಾಗ ಹೈದ್ರಾಬಾದ್ಗೆ ಬಂದಿದ್ದವರಲ್ಲಿ ಬಹುತೇಕ ಹೊಸಬರಿದ್ದರು. ಅವರಲ್ಲಿ ಶೇ. 50 ಮಂದಿ ಜರ್ನಲಿಸಂನಲ್ಲಿ ಒಂದು ಬೇಸಿಕ್ ಡಿಗ್ರಿಯನ್ನಾಗಲಿ, ಡಿಪ್ಲೊಮವೊಂದನ್ನಾಗಲಿ ಮಾಡಿದವರಲ್ಲ. ಹೀಗೆ ಹೈದ್ರಾಬಾದ್ಗೆ ಬಂದ ಜನ ಒಂದೆರಡು ವರ್ಷಗಳಲ್ಲಿ ಸಮಾನ ಮನಸ್ಕರು (ಅಥವಾ ಸ್ವಂತ ವ್ಯಕ್ತಿತ್ವ ಇಲ್ಲದವರೆಲ್ಲಾ) ಸೇರಿ ಒಂದು ಗುಂಪುಕಟ್ಟಿಕೊಂಡರು. ಅವರೇ ಮುಂದೆ ದೊಡ್ಡ ಆಂಕರ್ ಗಳಾದರು. ಅವರೇ ಸುದ್ದಿವಿಭಾಗದ ಕೋಆಡರ್ಿನೇಟರ್ಸ್ ಆದರು. ಹೀಗೆ ಬೇಸಿಕ್ ಆದ ತರಬೇತಿ ಪಡೆಯದ, ಒಂದು ದಿನವಾದರೂ ಫೀಲ್ಡಿಗೆ ಹೋಗಿ ವರದಿಮಾಡದ, ಸುದ್ದಿ ಬರೆಯದ ಜನರ ಕೈಗೆ ಸುದ್ದಿ ಮಾಧ್ಯಮವನ್ನು ಮುನ್ನಡೆಸುವ ಹೊಣೆಗಾರಿಕೆ ದೊರೆತರೆ ಇನ್ನೇನಾಗುತ್ತದೆ ಹೇಳಿ. ಈಟಿವಿಗೆ ಜನರನ್ನು ನೇಮಕ ನೇಮಕಮಾಡಿದಾಗ ರಾಮೋಜಿರಾವ್ಗೆ ಆಗಲಿ ನಾರಾಯಣಮೂತರ್ಿ ಅವರಿಗಾಗಲಿ, ರಾಮನುಜಂಗೆ ಆಗಲಿ ಇಲ್ಲಿನ ಜನರ ಪರಿಚಯವಿರಲಿಲ್ಲ. ಅವರಿಗಿದ್ದ ಮ್ಯಾನ್ಡೇಟ್ ಒಂದೇ ಕನರ್ಾಟದಲ್ಲಿ ಚಾನೆಲ್ ಮಾಡಬೇಕು. ಅದ್ಕಕಾಗಿ ಜನರ ನೇಮಕವಾಗಬೇಕು. ಆದ್ದರಿಂದ ಸಿಕ್ಕಸಿಕ್ಕವರನ್ನು ಆ ಚಾನೆಲ್ಗೆ ತುಂಬಿದರು. ಹೀಗೆ ಬಂದ ಜನರೆ ಮುಂದೆ ಟಿವಿ -9, ಸುವಣರ್ಾ, ಸಮಯ, ಜನಶ್ರೀ, ಕಸ್ತೂರಿ ಚಾನೆಲ್ಗಳಲ್ಲಿ ಗುಂಪು ಗುಂಪುಗಳಲ್ಲಿ ಸೇರಿಹೋದರು. ಈಟಿವಿಯಲ್ಲಿ ಕಲಿತದ್ದನ್ನೇ ಮುಂದಿನ ಚಾನೆಲ್ಗಳಲ್ಲಿ ಮಾಡತೊಡಗಿದರು. ಆದ್ದರಿಂದಲೇ ಇಂದು ಎಲ್ಲಾ ಚಾನೆಲ್ಗಳಲ್ಲಿ ಒಂದೊಂದು ಗುಂಪುಗಳು. ಆ ಗುಂಪಿಗೆ ಸೆಲ್ಯೂಟ್ ಹೊಡೆದರೆ ಮಾತ್ರ ಆ ಟಿವಿಗಳಿಗೆ ಸೇರ್ಪಡೆ. ಇಲ್ಲದಿದ್ದರೆ ನೀವೇಷ್ಟೇ ಪ್ರತಿಭಾವಂತರಾಗಿದ್ದರೂ ನಿಮಗೆ ಅವಕಾಶವಿಲ್ಲ. ಇದನ್ನು ಹೊಸ ಪತ್ರಿಗೆಗಳಿಗೂ ಅನ್ವಯಿಸಬಹುದು.
ಹೀಗೆ 12 ವರ್ಷಗಳ ಹಿಂದೆ ಆದ ಒಂದು ಪ್ರಮಾದ ಕನರ್ಾಟಕದ ಇಡೀ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಆವರಿಸಿ ಇಂದು ಆಗುತ್ತಿರುವ ಪ್ರಮಾದಗಳಿಗೆ ಸಾಕ್ಷಿಯಾಗುತ್ತಿದೆ. ಈಟಿವಿ ಶುರುವಾದಾಗ ಕನ್ನಡಪ್ರಭ, ಪ್ರಜಾವಾಣಿಯಂಥಹ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಭಾಷಾಂತರ ಮಾಡಿ, ವರಿದಗಾರಿಕೆ ಮಾಡಿ ನುರಿತಂಥವರು ಹೈದ್ರಾಬಾದ್ಗೆ ಹೋಗಲು ಮನಸ್ಸು ಮಾಡಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರೆ ಇಲ್ಲಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ಚಹರೆಯೇ ಬದಲಾಗುತ್ತಿತ್ತೆನೋ….ಆದರೆ ಹಾಗಾಗಲಿಲ್ಲ. ಅಲ್ಲಿಗೆ ಹೋದವರು ಹಾಳುರಿಗೆ ಉಳಿದ ಗೌಡರಂತಾದರು. ಅವರಲ್ಲಿಯೇ ಒಬ್ಬರನ್ನು ಚಾನೆಲ್ನ ಮುಖ್ಯಸ್ಥರನ್ನಾಗಿಸಲಾಯಿತು. ಮತ್ತೊಬ್ಬರನ್ನು ಸುದ್ದಿ ವಿಭಾಗಕ್ಕೆ ನೇಮಿಸಲಾಯಿತು. ಮತ್ತೊಬ್ಬರು ಆಂಕರ್ಗಳ ಮುಖ್ಯಸ್ಥರಾದರು. ಈ ಹಿಂದೆ ಆದ ಒಂದು ಪ್ರಮಾದ ಈಗ ಎಲ್ಲಾ ಚಾನೆಲ್ಗಳಲ್ಲಿ ಕಾಣಿಸುತ್ತಿದೆ ಎಂದೇ ಹೇಳಬಹುದು. ಹೀಗೆ ಈಟಿವಿಯಿಂದ ವಲಸೆ ಬಂದ ಒಬ್ಬೊಬ್ಬರು ಒಂದೊಂದು ಟೀಂ ಕಟ್ಟಿಕೊಂಡರು. ಈ ಟೀಂಗಳೇ ಈಗ ಬಹುತೇಕ ಚಾನೆಲ್ಗಳಲ್ಲಿ ಕೆಲಸ ಮಾಡುತ್ತಿವೆ, ಆದ್ದರಿಂಲೇ ಈ ಪ್ರಮಾದಗಳ ಸರತಿ.
ಒಂದು ಹೊಸ ಚಾನೆಲ್ ಶುರುವಾದರೆ ಈ ಟೀಂಗಳಲ್ಲಿಯೇ ಒಂದು ಸುದ್ದಿ ವಿಭಾಗದ ನೇತೃತ್ವ ವಹಿಸಿಕೊಳ್ಳುತ್ತದೆ. ಈ ಟೀಂಗೆ ಜೀ ಹುಜೂರ್ ಎನ್ನುವವರನ್ನು ಮಾತ್ರ ಆ ಚಾನೆಲ್ಗೆ ಸೇರಿಸಿಕೊಳ್ಳಲಾಗುತ್ತದೆ. ಬಹುತೇಕ ನೀವು ನೋಡಿ ಎಲ್ಲಾ ಚಾನೆಲ್ಗಳ ಜಿಲ್ಲಾ ವರದಿಗಾರರು, ಸುದ್ದಿ ವಿಭಾಗದಲ್ಲಿ ಕೆಲಸ ಮಾಡುವವರು ಹೀಗೆ ಜೀ ಹುಜೂರ್ ಎಂದು ನೇಮಕಗೊಂಡವರೇ. ನೀವು ಯಾವುದಾದರೂ ಹೊಸ ಚಾನೆಲ್ನವರು ಜಾಹಿರಾತು ನೀಡಿ, ಪರೀಕ್ಷೆ ನಡೆಸಿ, ಪ್ರತಿಭೆಗೆ ತಕ್ಕಂತೆ ನಿಸ್ಪಕ್ಷಪಾತವಾಗಿ ಅಭ್ಯಥರ್ಿಗಳನ್ನು ನೇಮಕ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. ಎಲ್ಲರೂ ಒಂದೊಂದು ಗುಂಪಿಗೆ ಸೇರಿದವರೇ. “ಎ” ಎಂಬ ವ್ಯಕ್ತಿ ಒಂದು ಗುಂಪಿಗೆ ಸೇರಿದ್ದರೆ ಸಾಕು ಆತನನ್ನು ನೇಮಕವಾದ ಮೂರೇ ದಿನಕ್ಕೆ ಸ್ಕ್ರಾಲ್ ನ್ಯೂಸ್ಗೆ ಹಾಕುತ್ತಾರೆ. ಅವನಿಗೆ ಬ್ರೇಕಿಂಗ್ ಯಾವುದು, ಫ್ಲಾಷ್ ಯಾವುದು, ಜಸ್ಟ್ ಇನ್ ಯಾವುದು ಹೀಗೆ ಏನೊಂದು ಗೊತ್ತಿರುವುದಿಲ್ಲ. ಜಿಲ್ಲೆಗಳಲ್ಲಿ ಚಾನೆಲ್ ಸೇರಿದ ಮೂರು ದಿನಕ್ಕೆ ಅವನು ಜಿಲ್ಲಾ ವರದಿಗಾರನಾಗುತ್ತಾನೆ. ಬೆಂಗಳೂರಿನಲ್ಲಿ ಚಾನೆಲ್ ಸೇರಿದ 15 ದಿನಕ್ಕೆ ಟಿವಿ ಪರದೆ ಮೇಲೆ ಆಂಕರ್ಗಳಾಗುತ್ತಾರೆ. ಎಲ್ಲವೂ ಗುಂಪುಗಾರಿಕೆಯ ಫಲ. ಆದ್ದರಿಂದಲೇ ಇಂಥಹ ಬ್ರೀಡ್ಗಳಿಂದಲೇ ಈ ಎಲ್ಲಾ ಅವಾಂತರಗಳು. ಸುದ್ದಿಕೊಟ್ಟವನಿಗೂ ಗೊತ್ತಿರುವುದಿಲ್ಲ. ಹಾಕುವವನಿಗೂ ಅದೇನೆಂದು ಗೊತ್ತಾಗುವುದಿಲ್ಲ. ಇತ್ತ ಮುಖ್ಯಸ್ಥನಿಗೂ ಸಾರ್ವಜನಿಕ ಹಿತಾಸಕ್ತಿ ಏನೆಂದು ಅರಿವಾಗುವುದಿಲ್ಲ. ಆದ್ದರಿಂದಲೇ ಜನ ಐದು ನಿಮಿಷಕ್ಕೊಂದು ಬ್ರೇಕಿಂಗ್ ನ್ಯೂಸ್ ನೋಡುವುದು.
ಸಮೂಹ ಮಾಧ್ಯಮದ ತಾಕತ್ತು, ಜವಾಬ್ದಾರಿ ಏನೆಂದು ಅರಿಯದವರು ಇಂದು ಚಾನೆಲ್ಗಳ ಮುಖ್ಯಸ್ಥರಾಗಿರುವುದರಿಂದಲೇ ಈ ಪ್ರಮಾದಗಳ ಸೃಷ್ಟಿ. ಯಾವ ಚಾನೆಲ್ನ ಮುಖ್ಯಸ್ಥ ವರದಿಗಾರಿಕೆ ವಿಭಾಗವನ್ನು ವಿಷಯಗಳ ಅಧ್ಯಯನಕ್ಕೆ, ಹುಡುಕಾಟಕ್ಕೆ ಹಚ್ಚುವುದಿಲ್ಲವೋ, ಯಾವ ಸುದ್ದಿ ವಿಭಾಗವನ್ನು ಸುದ್ದಿಯ ಆಳ, ಉದ್ದ, ಅಗಲ ಅರಿಯಲು ಪ್ರೇರೆಪಿಸುವುದಿಲ್ಲವೋ ಆಗ ಸುದ್ದಿಗಳ ಜಿನುಗು, ಉದ್ಭವ ಬತ್ತುವುದಿಲ್ಲ. ಯಾವಾಗ ಈ ಕೆಲಸ ಆಗುವುದಿಲ್ಲವೋ, ಆಗ ವರದಿಗಾರರು ಪ್ರೆಸ್ಮೀಟ್ಗೆ ಹೋಗಿ ಹೇಳಿದ್ದನ್ನು ಬರೆದುಕೊಂಡು ಬರುತ್ತಾರೆ. ಅಲ್ಲಿಂದಲೇ ಕ್ಯಾಸೆಟ್ ಕಳುಹಿಸಿ ನೀವೇ ಸುದ್ದಿ ಬರೆದುಕೊಳ್ಳುವಂತೆ ಸುದ್ದಿ ವಿಭಾಗದವರಿಗೆ ಸೂಚಿಸುತ್ತಾರೆ. ನಿನ್ನೆ ಮೊನ್ನೆ ಚಾನೆಲ್ಗೆ ಬಂದವನೊಬ್ಬ ಕ್ಯಾಸೆಟ್ಗೆ ಹೆಡ್ಪೋನ್ ಹಾಕಿ ಕೇಳಿಸಿಕೊಂಡು ಮತ್ತೇನನ್ನೋ ಬ್ರೇಕಿಂಗ್ ಕೊಟ್ಟುಬಿಡುತ್ತಾನೆ. ಸುದ್ದಿ ಸೋಸುವ ಬದಲು ಸೋರಿಸಿ ಜನರಿಗೆ ಮತ್ತೇನನ್ನೋ ತಲುಪಿಬಿಡುತ್ತಾನೆ. ಆಗಲೇ ಉದ್ಘಾಟನೆ, ಬಿದ್ದಿದ್ದು, ಪೂಜೆ ಮಾಡಿದ್ದು, ಮುಖ ನೋಡಿದ್ದು, ಎದುರು ಬದುರಾಗಿದ್ದು ಬ್ರೇಕಿಂಗ್ ಆಗಿಬಿಡುತ್ತದೆ. ಇದನ್ನು ಸುದ್ದಿ ಮುಖ್ಯಸ್ಥರಿಗೆ ಗೊತ್ತಾಗುವುದು ನಿಮ್ಮಂಥವರು ಬೈಯ್ದಾಗಲೇ.
ಬಹುತೇಕ ನೋಡಿ ಜಿಲ್ಲಾ ಕೇಂದ್ರಗಳಿಂದ ಒಂದೇ ತೆರನಾದ, ಒಂದೇ ಸಮಯಕ್ಕೆ ಎಲ್ಲಾ ಸುದ್ದಿಗಳು ಬ್ರೇಕ್ ಆಗುತ್ತವೆ. ಕಾರಣ ಇಷ್ಟೇ. ಎಲ್ಲಾ ಚಾನೆಲ್ನ ವರದಿಗಾರರು ಒಪ್ಪಂದದ ವರದಿಗಾರಿಕೆ ಮಾಡತೊಡಗಿದ್ದಾರೆ ಈಗ. ಒಂದು ಕಾರ್ಯಕ್ರಮಕ್ಕೆ ಒಬ್ಬನೇ ವರದಿಗಾರ, ಕ್ಯಾಮರಾಮನ್ ಹೋಗಿ ಅವನು ಕೊಟ್ಟಿದ್ದನ್ನು ಇತರರು ಕಾಪಿ ಮಾಡುತ್ತಾರೆ. ಇದರಿಂದಲೆ ಏಕಕಾಲಕ್ಕೆ ಎಲ್ಲಾ ಚಾನೆಲ್ಗಳಲ್ಲಿ ಸುದ್ದಿಗಳು ಬ್ರೇಕ್ ಆಗುತ್ತವೆ. ಹಾಗೆಯೇ ಸತ್ತುಹೋಗುತ್ತವೆ. ಜಿಲ್ಲಾ ಕೇಂದ್ರಗಳಲ್ಲಿ ಸ್ವಂತಿಕೆಯಿಂದ ಕೆಲಸ ಮಾಡುವವರನ್ನು ಸೂಕ್ಷ್ಮ ದರ್ಶಕ ಹಾಕಿ ಹುಡುಕಾಡಬೇಕಾಗಿದೆ. ಯಾರಿಗೆ ಯಾವುದು ಸಾರ್ವಜನಿಕ ಹಿತಾಸಕ್ತಿ ಇರುವ ಸುದ್ದಿ, ಅವರ ಪರಿಣಾಮಗಳು, ಆ ಸುದ್ದಿಗೆ ಇರುವ ಶಕ್ತಿ, ತಾಕತ್ತು ಅರಿಯದೇ ವರದಿ ಮಾಡುವುದರಿಂದಲೇ ಬ್ರೇಕಿಂಗ್ ನ್ಯೂಸ್ ಹಾವಳಿ ಹೆಚ್ಚಾಗಿದೆ. ಇಲ್ಲದಿದ್ದರೆ ಇತರ ಸುದ್ದಿಗಳೂ ಹೆಚ್ಚಾಗುತ್ತಿದ್ದವು. ಕತೆ, ಕವನ ಬರೆಯುವುದನ್ನು ಬಿಟ್ಟು ಸುದ್ದಿ ಹೇಳುವ, ಸುದ್ದಿಯ ಅಧ್ಯಯನ, ಅದರ ಆಳ ಅಗಲ ವಿಸ್ತಾರವನ್ನು ಶೋಧಿಸಿ ಜನರಿಗೆ ತಲುಪಿಸುವ ಕೆಲವನ್ನು ಮುಖ್ಯಸ್ಥರು ಮಾಡಿದರೆ ಸುದ್ದಿಗೆ ಬರ ಇರುವುದಿಲ್ಲ. ಆಗ ಕೆಟ್ಟದ್ದು ಆಗುವುದನ್ನು ಕಾಯ್ದು ಕುಳಿತುಕೊಳ್ಳುವ ಸರದಿ ಪತ್ರಕರ್ತರಿಗೆ ಬರುವುದಿಲ್ಲ. ಎಲ್ಲಿ ಸುದ್ದಿ ಹುಡುಕಾಟ ನಿಂತಿರುತ್ತದೆಯೋ, ಎಲ್ಲಿ ಸುದ್ದಿ ತೆಗೆಯುವವರ ಚಲಶೀಲತೆ ಸ್ಥಗಿತಗೊಂಡಿರುತ್ತದೋ ಆಗ ಮಾತ್ರ “ಪತ್ರಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೇ”…..ಆಗುತ್ತದೆ.

Advertisements

ಪಾರ್ವತಿ: ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು

ಪಾರ್ವತಿ:

ತಾಯಂದಿರ ದಿನ ಪಾರ್ವತಿ ತುಂಬಾ ನೆನಪಾಗುತ್ತಿದ್ದಾಳೆ. ಹಲವು ವರ್ಷಗಳ ನಂತರ ತಳಮಳ ಹುಟ್ಟಿಹಾಕಿದ್ದಾಳೆ. ಆಕೆಗಿದ್ದ ಸ್ವಾಮಿನಿಷ್ಠೆ, ಪ್ರೀತಿ, ತನ್ನದು, ನನ್ನವರೆಂಬ ನಿವರ್ಾಜ್ಯ ಪ್ರೇಮ ಇಂದು ಕಾಡಹತ್ತಿದೆ. ಅಂಥದ್ದೊಂದು ಜೀವ ಎಲ್ಲಿಯಾದರೂ, ಯಾರಾದರೂ ಇದ್ದಾರೆಯೇ ಎಂದು ಮನಸ್ಸು ಹುಡುಕುತ್ತಲೇ ಇದೆ. ಆದ್ದರಿಂದಲೇ ಬಹಳ ವರ್ಷಗಳಿಂದ ಪಾರ್ವತಿ ಗುಣವುಳ್ಳ ಮಹಿಳೆಯರು ಎಲ್ಲಿಯಾದರೂ ಕಾಣುವರೇ ಎಂದು ಹುಡುಕಾಟ ನಡೆಸಿದ್ದೇನೆ. ಇಷ್ಟು ವರ್ಷ ಕಳೆದರೂ ಎಲ್ಲೂ ಅಂಥಹ ಅದ್ಭುತ ಗುಣಗಳುಳ್ಳ ಮಹಿಳೆ ನನಗೆ ಕಾಣ ಸಿಗಲೇ ಇಲ್ಲಾ. ಅದೆಂಥ ಪ್ರೀತಿ ತೋರಿದಳು ನಮಗೆ ಆಕೆ ! ಆಕೆ ನನ್ನ ತಾಯಿಯಾಗಿ, ಪ್ರೀತಿಯ ಅಜ್ಜಿಯಾಗಿ, ಅಕ್ಕನಾಗಿ……ಓ…….ಏನೆಲ್ಲಾ ನಮಗಾಗಿದ್ದಳು…..ಅವಳ ಪ್ರೀತಿಯ ಬೇಲಿಯಲ್ಲಿ ನಾವೆಲ್ಲಾ ಮಿಂದು ಬೆಳೆದಿದ್ದು ಸುಮಾರು 25 ವರ್ಷ ಕಳೆದ ನಂತರವೂ ನನ್ನನ್ನು ಕಾಡುತ್ತಿದೆ. 
ನಿಜಕ್ಕೂ ಆಕೆ ನನ್ನ ತಾಯಿಗಿಂತ ಮಿಗಿಲು. ಪಾರ್ವತಿ ಏಕೆ ಭಿನ್ನವಾಗಿ ಕಾಣುತ್ತಾಳೆಂದರೆ ಆಕೆ ಎಲ್ಲವೂ ಆಗಿದ್ದಳು. ನಮ್ಮ ಮನೆಯಲ್ಲಿದ್ದ ಅಷ್ಟೂ ಎಮ್ಮೆ, ಕೋಣ, ಹಸುಗಳ ಜತೆ ಆಕೆ ಮಾತನಾಡುತ್ತಿದ್ದಳು. ಇಡೀ ಊರಿನ ಯಾವುದೇ ಭಾಗದಲ್ಲಿ ಎಲ್ಲೇ ಸಗಣಿ ಬಿದ್ದಿದ್ದರೂ ಅದು ಅರ್ಧ ಕ್ಷಣದಲ್ಲಿ ಅವಳ ಕಂಕುಳಲ್ಲಿ ಇದ್ದ ಪುಟ್ಟಿಯಲ್ಲಿ ತುಂಬಿರುತ್ತಿತ್ತು. ಊರ ಹೊರಗೆ ಎಮ್ಮೆ ಮೇಯಿಸಿಕೊಂಡು ಸಂಜೆ ಬರುವಾಗಲಂತೂ ಆ ಪುಟ್ಟಿಯ ಮೇಲೆ ಸಗಣಿಯ ಪೆಂಡಿಗಳು ತುಂಬಿರುತ್ತಿದ್ದವು. ಎಮ್ಮೆ ಮೇಯುಸುತ್ತಾ ಸಿಕ್ಕ ಸಗಣಿಯನ್ನು ಹಡ್ಲಲ್ಲಿದ್ದ ಕಲ್ಲುಗಳ ಮೇಲೆ ತೊಟ್ಟಿ ಆಕೆ ಸಗಣಿ ಪೆಂಡಿ ಮಾಡುತ್ತಿದ್ದಳು. ಒಂದೊಂದು ಎಮ್ಮೆ, ಕರು, ಕೋಣ, ಹಸುವಿಗೆ  ಒಂದೊಂದು ಹೆಸರಿಟ್ಟಿದ್ದಳು. ಆಕೆ ಊರತುಂಬಾ ಎಮ್ಮೆ ಪಾರ್ವತಿ ಎಂದೇ ಹೆಸರಾಗಿದ್ದಳು. ಅವಳ ಕಣ್ಣ ಇಶಾರೆಗೆ ಆ ಮೂಕ ಪ್ರಾಣಿಗಳು ಮಾತನಾಡುತ್ತಿದ್ದವು. ಅವಳು ಎದುರಿಗಿದ್ದರೆ, ಅವಳು ಮೈದಡವಿದರೆ ಮಾತ್ರ ಅವುಗಳು ಹಾಲು ಕೊಡುತ್ತಿದ್ದವು. ಓ ಅವುಗಳ ಬಾಣಂತನ, ಮದುವೆ ಎಲ್ಲವನ್ನೂ ಪಾರ್ವತಿಯೇ ಮಾಡುತ್ತಿದ್ದಳು ! ಅವುಗಳು ಕಾಯಿಲೆ ಬಿದ್ದರೆ ಅಕ್ಷರಶ: ಆಕೆ ಅಮ್ಮನಾಗಿರುತ್ತಿದ್ದಳು……ದೊಡ್ಡಪ್ಪ, ಮುಗಕರ್ಿಗೆ ನಾಲಿಗೆ ಊತ ಬಂದಿದೆ, ಕಿವಿ ಹಕರ್ಿ ಮಣಕ ಬೆದೆಗೆ ಬಂದಿದೆ ಎನ್ನುವುದರಿಂದ ಹಿಡಿದು ಆ ಮೂಕ ಪ್ರಾಣಿಗಳ ಗಂಜಲದ ವಾಸನೆವರೆಗೂ ಆಕೆಗೆ ತಿಳುವಳಿಕೆ ಇತ್ತು. ಮುಗಕರ್ಿಯ ಮಕ್ಕಳು, ಮರಿಮಕ್ಕಳತನಕ ಎಲ್ಲರ ಹೆಸರು ಆಕೆ ನಾಲಿಗೆ ಮೇಲಿರುತ್ತಿತ್ತು. ಅವುಗಳಿಗೆ ಹೆಸರಿಡಲು ಅವಳೇ ಪುರೋಹಿತಳಾಗಿರುತ್ತಿದ್ದಳು. ಎಲ್ಲೋ ದಂಡಿನವರ ಗುಂಡಿಗೆ ಬಿದ್ದು ಕರು ಸಿಕ್ಕಿಕೊಂಡರೆ “ದಂಡಿನ ಗುಂಡಿ ಕರು” ಹೆಸರು ಚಾಲ್ತಿಗೆ ಬಂದು ಬಿಡುತ್ತಿತ್ತು. ಬರೋಬರಿ 30 ಎಮ್ಮೆ, ಕೋಣಗಳು, 20 ಹಸು ಕರುಗಳನ್ನು ಅವಳು ಬೆಳಿಗ್ಗೆಯಿಂದ ಮೇಯಿಸಿಕೊಂಡು ಸಂಜೆ ತಂದು ಕೊಟ್ಟಿಗೆಗೆ ಕಟ್ಟುತ್ತಿದ್ದಳು. ಬೆಳಿಗ್ಗೆ ಐದು ಗಂಟೆಗೆ ಎದ್ದು ಕೊಟ್ಟಿಗೆ ಕಸ ಎತ್ತುವುದು. ಕರುಗಳನ್ನು ಬಿಟ್ಟು ಉಳಿದವುಗಳನ್ನು ಹೊರಗೆ ಕಟ್ಟುವುದು, ಕರುಗಳು ಹಾಲು ಕರೆದುಕೊಳ್ಳುವುದಕ್ಕೆ ಮುಂಚೆ ತಾಯಿ ಎಮ್ಮೆಗಳ ಕೆಚ್ಚಲನ್ನು ಮುಟ್ಟದಂತೆ ನಿಗಾವಹಿಸುವುದರಿಂದ ಹಿಡಿದು, ಯಾವ ಎಮ್ಮೆಯನ್ನು ಯಾವ ಗೊಂತಿಗೆ ಕಟ್ಟಬೇಕು, ಯಾವ ಹಸುವನ್ನು ಯಾವ ಬೇಲಿಯ ಬುಡಕ್ಕೆ ಕಟ್ಟಬೇಕು. ಯಾವುದಕ್ಕೆ ಶೀತವಾಗಿದೆ, ಯಾವುದು ಕುಂಟುತ್ತಿದೆ, ಯಾವುದಕ್ಕೆ ಮೇವು ಕಡಿಮೆ, ಹೆಚ್ಚಾಗಿದೆ ಎಲ್ಲವೂ ಈ “ಡಾಕ್ಟರ್” ಪಾರ್ವತಿಗೆ ತಿಳಿದಿರುತಿತ್ತು. ಅವಳು ಬೆಳಿಗ್ಗೆ ಎದ್ದು ಅವಳ ಸೈನ್ಯದ ಸಮೇತ ಹಡ್ಲು ಅಂದರೆ ಊರ ಹೊರಗಿನ ಹುಲ್ಲುಗಾವಲಿಗೆ ಹೊರಟಲೆಂದರೆ ಅದೊಂದು ಮೆರವಣಿಗೆ….ಮೆರವಣಿಗೆ ತುಂಬೆಲ್ಲಾ ಧೂಳು…….ಮುಗಿಲು ಮುಟ್ಟುತ್ತಿತ್ತು.
ಯಾವ ಸೊಪ್ಪನ್ನು ಅರೆದು ಕುಡಿಸಿದರೆ ಆ ಕಾಯಿಲೆ ಕಡಿಮೆಯಾಗುತ್ತದೆ, ಯಾವ ಗೊಟ್ಟದಲ್ಲಿ ನಾಟಿ ಔಷಧಿ ಕುಡಿಸಬೇಕು, ಹಾಲು ಕೊಡುವುದನ್ನು ಹೆಚ್ಚಿಸುವುದು ಹೇಗೆ, ಹಾಲು ಕೊಡುವ ಎಮ್ಮೆಗಳು ಬೇಗ “ಮಾನಸಿ” ಕೊಳ್ಳದಿರಲು ಏನು ಮಾಡಬೇಕು, ಹೀಗೆ ಎಲ್ಲಾ ಜ್ಞಾನ ಆಕೆಗಿತ್ತು. ಒಂದು ರೀತಿಯಲ್ಲಿ ಆಕೆ “ಪಶು ವೈದ್ಯೆ”.
ನಮ್ಮವು ಎಮ್ಮೆಗಳು ಎಂದು ಯಾರೂ ನೇರವಾಗಿ ಹಾಲು ಕರೆಯುವಂತಿರಲಿಲ್ಲ. ನಮ್ಮ ಅತ್ತಗೆಯಂದಿರು ಹೀಗೆ ಹಾಲು ಕರೆಯಲು ಹೋಗಿ ಮುಗಕರ್ಿಯಿಂದ ಒದೆಸಿಕೊಂಡು ಬಂದು ಶಾಪ ಹಾಕುತ್ತಿದ್ದರು. ಏಕೆಂದರೆ ಯಾರೇ ಹಾಲು ಕರೆಯಲು ಹೋದರೂ ಅವುಗಳು ಸಹಕರಿಸುತ್ತಿರಿಲ್ಲ. ಪಾರ್ವತಿ ಎದುರಿಗಿದ್ದರೆ ಮಾತ್ರ ಅವುಗಳು ಮಾತ್ರ ಮಾಉ ಕೇಳುತ್ತಿದ್ದವು.
ಯಾಕೆ ಬೋಸೂಡಿ ಸುಮ್ನೆ ನಿಲ್ಲಕ್ಕೆ ಆಗಲ್ವಾ, ಕೊಡೆ ಹಾಲನ್ನು, ಕದ್ದು ಉಳಿಸಿಕೊಳ್ಳುತ್ತೀಯಾ…..ಹೀಗೆ ತರಾವರಿ ಬೈಗಳಗಳನ್ನು ನಾವು ಬೆಳಿಗ್ಗೆ ಏಳುತ್ತಲೇ, ಅಮ್ಮ ಇರುತ್ತಿದ್ದ ಒಲೆ ಮುಂದೆ ಕುಳಿತುಕೊಂಡೇ ಕೇಳಿಸಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ರಾತ್ರಿ ಮಲಗಿದ್ದಾಗಲೂ ಕೊಟ್ಟಿಗೆಯಲ್ಲಿ ಪಾರ್ವತಿ ಹಾಗೂ ಅವಳ ಎಮ್ಮೆಗಳ ಮಾತುಕತೆ ಕಿವಿಗೆ ಬೀಳುತ್ತವೇ ಇತ್ತು. 
ಯಾಕೆ ಅವಳ ಹುಲ್ಲಿಗೆ ಬಾಯಿ ಹಾಕುತ್ತೀಯಾ, ನೀರು ಬೇಕೆನೆ, ಗಂಜಲ ಉಯ್ಯೆ, ಕರ ಹತ್ತಿರಕ್ಕೆ ಬಿಟ್ಟುಕೊಬೇಡ, ಯಾಕೆ ಅವಳನ್ನು ಒತ್ತಲಿಸುತ್ತೀಯಾ, ಕುಸ್ತಿಗೆ ಯಾಕೆ ಹೋಗಿದ್ದೀಯಾ, ಯಾಕೆ ಸುಮ್ಮನೆ ಮಲಗಕೆ ಆಗುವುದಿಲ್ಲವಾ, ಈಗ ಎದ್ದು ಬರಲಾ, ಗ್ರಹಚಾರ ಬಿಡುಸುತ್ತೇನೆ…..ಹೀಗೆ ರಾತ್ರಿ ಇಡೀ ಏನಾದರೊಂದು ಮಾತು  ಕಿವಿಗೆ ಬೀಳದೆ ಇರುತ್ತಿರಲಿಲ್ಲ. ಹಾಗಿತ್ತು ಆ ಮೂಕ ಪ್ರಾಣಿಗಳ – ಪಾರ್ವತಿ ನಡುವಿನ ಒಡನಾಟ.
ನಮ್ಮದೊಂದು ಕುರಿ, ಎಮ್ಮೆ, ಕೋಣ, ದನ, ಹಸುಗಳನ್ನು ಮೇಯಿಸುವ ಹಡ್ಲಿತ್ತು. ಅದೊಂಡು 20 ಎಕರೆಯಷ್ಟಿದ್ದ ವಿಶಾಲವಾದ ಹಸಿರು ನೆಲ ಅದು. ಈ ಕಡೆ ನಿಂತೆ ಆ ಕಡೆ ಕಾಣಿಸುತ್ತಿರಲಿಲ್ಲ. ಅಷ್ಟು ಎತ್ತರಕ್ಕೆ ಸದಾ ಹುಲ್ಲಿ ಬೆಳೆದು ನಿಂತಿರುತ್ತಿತ್ತು. ನಡುವಲ್ಲಿ ನೀರು ಹರಿಯುತ್ತಿತ್ತು. ಅಲ್ಲಲ್ಲಿ ನೀರು ಕುಡಿಸಲು ಗುಂಡಿಗಳಿದ್ದವು.  ಅಲ್ಲೊಂಡು ದೊಡ್ಡ ಗುಂಡಿ ಇತ್ತು. ಅಲ್ಲಿ ಆಗೊಮ್ಮೆ ಈಗೊಮ್ಮೆ ಎನ್ ಎಚ್ -4 ರಸ್ತೆಯಲ್ಲಿ ಹೋಗುತ್ತಿದ್ದ ಮಿಲಿಟರಿ ಲಾರಿಗಳ ಸೈನಿಕರು ವಿಶ್ರಮಿಸಿಕೊಳ್ಳಲು ನಿಲ್ಲಿಸಿ ಅಡುಗೆ ಮಾಡಿಕೊಂಡು ಊಟ ಮಾಡಿ ಹೋಗುತ್ತಿದ್ದರಂತೆ. ಹೀಗೆ ಒಂದೈದಾರು ಬಾರಿ ಆದ ನಂತರ ಅದಕ್ಕೆ ದಂಡಿನವರ ಗುಂಡಿ ಎಂದು ಹೆಸರು ಬಂತೆಂದು ಹೇಳಲಾಗುತ್ತಿತ್ತು. ಹಡ್ಲು ಎಂದರೆ ಕೇವಲ ರಾಸುಗಳು ಮೇಯಲು ಮೀಸಲಾಗಿಟ್ಟಿರುವ ಹುಲ್ಲಿಗಾವಲು. ಅಲ್ಲಿ ಉಳಿಮೆ ಮಾಡುವುದಿಲ್ಲ. ಬರೀ ಹುಲ್ಲು ಬೆಳೆಯಲು ಬಿಡಲಾಗುತ್ತದೆ. ಪ್ರತಿದಿನ ಮನೆಯ ಎಲ್ಲಾ ರಾಸುಗಳನ್ನು ಹೊಡೆದುಕೊಂಡು ಅಲ್ಲಿಗೆ ಹೋಗಲಾಗುತ್ತಿತ್ತು. ಅಲ್ಲಿಗೆ ಹೋದರೆ ನಮ್ಮ ಮನೆಯ ಎಲ್ಲಾ ಆಳುಗಳು ಅಲ್ಲಿ ಏಕ ಕಾಲಕ್ಕೆ ಸಿಕ್ಕುತ್ತಿದ್ದರು. ಕುರಿ ಕಾಯುವ ರಾಮ, ಹನುಮಂತ, ದನ ನೋಡಿಕೊಳ್ಳುವ ಕುಂಬಿ, ಹನುಮನರಸ, ತೋಟದ ಹನುಮ, ಚೌಡ, ಅಡಿಕೆ ತೋಟ, ಮಾವಿನ ತೋಟ ನೋಡಿಕೊಳ್ಳುವ ದೊಂಬರ ಗುಗ್ಗ, ಭೋಗ, ಚೆಲುವ, ಹಿಪ್ಪೆ ತೋಪಿನ ಕಡೆ, ಹೊಂಗೆ ತೋಪು, ಹುಣಸೆ ತೋಪು, ಸೀಗೆ ತೋಪು, ಗದ್ದೆ, ಹೊರ ಊರಿನ ಹೊಲಗಳ ಉಸ್ತುವಾರಿ ನೋಡಿಕೊಳ್ಳುವ ಕೆಂಚ ನಾಯಕ, ಸಿದ್ದನರಸ, ತಳವಾರ ನರಸಿಂಹ, ಯಳವಣ್ಣ, ಸಿದ್ದಲಿಂಗ, ಜಯಣ್ಣ, ಗಂಗರಾಮಣ್ಣ, ಚಿಕ್ಕ ಹನುಮಯ್ಯ, ಒಡಾರಯ್ಯ ಹೀಗೆ ಎಲ್ಲರೂ ಅಲ್ಲಿರುತ್ತಿದ್ದರು. ಪ್ರತಿಯೊಬ್ಬರೂ ಅಲ್ಲಿಗೆ ಬಂದೇ ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಿದ್ದರು. 7 ಗಂಟೆಗೆಲ್ಲಾ ನಮ್ಮ ಮನೆಯ ಜಗುಲಿ ಮೇಲೆ ಕುಳಿತುಕೊಳ್ಳುತ್ತಿದ್ದ ನಮ್ಮಪ್ಪ, ಯಾರು ಎಲ್ಲಿಗೆ ಹೋಗಬೇಕು, ಯಾರು ಯಾವುದರ ಉಸ್ತುವಾರಿಗೆ ಹೋಗಬೇಕು, ಊಟ ಯಾರು ಹೊತ್ತುಕೊಂಡು ಹೋಗಬೇಕು. ಹೀಗೆ ಎಲ್ಲವನ್ನೂ ನಿರ್ಧರಿಸಿಬಿಡುತ್ತಿದ್ದರು. ನಮ್ಮಣ್ಣ, ಅಕ್ಕಂದಿರು ಆಳುಗಳನ್ನು ಕರೆದುಕೊಂಡು ಬರುವುದರಿಂದ ಹಿಡಿದು, ಲೆಕ್ಕ ಬರೆದುಕೊಳ್ಳುವುದು ಇವೆಲ್ಲವನ್ನೂ ನಿಭಾಯಿಸುತ್ತಿದ್ದರು. ಅಮ್ಮ ಮಾತ್ರ ಎಂದಿನಂತೆ ಪ್ರತಿದಿನ ಕನಿಷ್ಠ 100 ಜನರಿಗೆ ಅಡುಗೆ ಮಾಡಿಹಾಕುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ 5 ಗಂಟೆಗೆ ಹೊಲೆ ಹೊತ್ತಿಸಿದರೆಂದರೆ ಆರಿಸುತ್ತಿದ್ದು ಇನ್ನು ರಾತ್ರಿ 12 ಗಂಟೆಗೆ. ನಾವು ಐದು ಮಂದಿ, ನಮ್ಮ ದೊಡ್ಡಮ್ಮನ ಮಕ್ಕಳು ಐದು ಮಂದಿ, ನಮ್ಮ ತಂದೆ ಅಣ್ಣ, ಅವರ 10 ಮಂದಿ ಮಕ್ಕಳು, ಅವರ ತಮ್ಮ, ಅವರ 8 ಮಂದಿ ಮಕ್ಕಳು, ಒಂದಷ್ಟು ಮಂದಿ ಮೊಮ್ಮಕ್ಕಳು, ಒಂದಷ್ಟು ಮಂದಿ ನೆಂಟರು, ಮನೆಯಲ್ಲೇ ಇರುತ್ತಿದ್ದ ಒಂದು 10 ಮಂದಿ ಆಳುಗಳು… ಹೀಗೆ ಪ್ರತಿದಿನ ಅಡುಗೆ ಮಾಡುವುದು ಅಮ್ಮನ ಕೆಲಸವಾಗಿತ್ತು. ಈಗಿನಂತೆ ಆಗ ಗ್ಯಾಸ್, ಕರೆಂಟ್ ಒಲೆ ಇರಲಿಲ್ಲ. ನೀರು ಮನೆ ಒಳಗೆ ಬರುತ್ತಿರಲಿಲ್ಲ. ಊರ ಹೊರಗಿನ ಬಾವಿಯಿಂದ ನೀರು ಸೇದಿಕೊಂಡು ಬರಬೇಕಾಗಿತ್ತು. ಒಲೆ ಉರಿಸಲು ಪ್ರತಿದಿನ ಕಟ್ಟಿಗೆ ಬೇಕಾಗಿತ್ತು. ಒಮ್ಮೊಮ್ಮೆ ಒಣಗಿದ ಕಟ್ಟಿಗೆ ಇರಲಿಲ್ಲ ಎಂದರೆ ಮನೆಯೆಲ್ಲಾ ಹೊಗೆ ತುಂಬಿಕೊಳ್ಳುತ್ತಿತ್ತು. ಊದು ಕೊಳವೆಯಲ್ಲಿ ಹೊಲೆ ಊದಿ ಊದಿ ಕಣ್ಣೀರು ಬರುತ್ತಿದ್ದವು. ಹಿರಿ ಸೊಸೆಯನ್ನು ಬಿಟ್ಟರೆ ಬೇರೆ ಇನ್ಯಾವುದೇ ಸೊಸೆಯರು ಅಡುಗೆ ಮನೆಗೆ ಕಾಲಿಡುತ್ತಿರಲಿಲ್ಲ. ಅಡುಗೆ ಮಾಡಿಟ್ಟಾಕ್ಷಣ ತಮ್ಮ ಗಂಡ ಮಕ್ಕಳಿಗೆ ಬಡಿಸುವ ಸಲುವಾಗಿ ಎಷ್ಟು ಬೇಕೊ ಅಷ್ಟನ್ನು ಎತ್ತಿಕೊಂಡು ತಮ್ಮ, ತಮ್ಮ ರೋಮು ಸೇರಿಬಿಡುತ್ತಿದ್ದರು…..

ಎಮ್ಮೆ, ಹಸುಗಳ ಜತೆ ಅಷ್ಟೊಂದು ಸ್ನೇಹದಿಂದ ಇರುತ್ತಿದ್ದ ಪಾರ್ವತಿ ಹಡ್ಲಿಗೆ ಹೋದಳೆಂದರೆ ಮಹಾಮಾರಿಯಾಗಿರುತ್ತಿದ್ದಳು. ಅಲ್ಲಿಗೆ ಹೋಗುತ್ತಿದ್ದ ಎಲ್ಲಾ ಆಳುಕಾಳುಗಳು ಪಾರ್ವತಿಯನ್ನು ಕಂಡರೆ ಹೆದರುತ್ತಿದ್ದರು. ಅವಳ ಎಮ್ಮೆ ತಂಟೆಗಾಗಲಿ ಅವಳ ತಂಟೆಗಾಗಲಿ ಹೋಗುತ್ತಿರಲಿಲ್ಲ. ಮೇಯುವ ಎಮ್ಮೆಗಳನ್ನು ಯಾರಾದರೂ ಚದುರಿಸಿದರೆ ಅಲ್ಲೆ ಇರುತ್ತಿದ್ದ ಎಕ್ಕದ ಗಿಡದ ಕಡ್ಡಿ ಮುರಿದುಕೊಂಡು ಪಾರ್ವತಿ ಬಿಟ್ಟಳೆಂದರೆ ಬರೆ ಬರುತ್ತಿದ್ದವು. ಅಷ್ಟೆ ಅಲ್ಲಾ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಕಾಡೆ ಹಾಕಿ ಮಣ್ಣಾಕ ಎಂಬುದರಿಂದ ಹಿಡಿದು ಬೋಳಿಮಗ, ಸೂಳೆ ಮಗ, ಹಾವುಕಡಿಯ, ರಕ್ತಕಕ್ಕ, ಮನೆಗೆ ಮುಳ್ಳಾಕ……….ಹೀಗೆ ನೂರಾರು ಬೈಗುಳಗಳು….ಅವಳ ಬಾಯಲ್ಲಿ. ಅಂಥ ದೊಡ್ಡ ನಿಂಘಟು ಅವಳ ನಾಲಿಗೆ ಮೇಲೆ ! ಒಮ್ಮೆ ಅವಳ ಬಾಯಿಗೆ ಸಿಕ್ಕರೆ ಮುಗಿಯಿತು. ಇಡೀ ದಿನ ಅವಳ ಶಾಪಕ್ಕೆ ಗುರಿಯಾಗಬೇಕಾಗಿತ್ತು. ಹಡ್ಲಿನಿಂದ ಮನೆಗೆ ಬರುವವರೆಗೂ ಒಮ್ಮೊಮ್ಮೆ ರಾತ್ರಿಯೆಲ್ಲಾ ಪಾರ್ವತಿ ಶಾಪಹಾಕುತ್ತಿದ್ದಳು….ಆ ಬೈಗುಳಗಳು ಯಾವುದೇ ನಿಂಘಟಿನಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಎಲ್ಲಾ ಅಂಥಹ ಅದ್ಭುತ ಬೈಗುಳಗಳು ! ಎಲ್ಲವೂ ಶಾಪದ ಸ್ವರೂಪದಲ್ಲೇ ಇರುತ್ತಿದ್ದವು……ಬರೀ ಆಳುಕಾಳುಗಳೇನು ಊರಿನವರು, ಸುತ್ತಮುತ್ತಲ ಊರಿನ ಜನ ಸಹ ಪಾರ್ವತಿ ಕಂಡರೆ ಹೆದರುತ್ತಿದ್ದರು……ಅವಳ ಬೈಗುಳ, ಜತೆಗೆ ಶಾಪ…….
ಪಾರ್ವತಿಗೆ ಮದುವೆಯಾಗಿತ್ತಂತೆ, ಗಂಡ ಚಿಕ್ಕವಯಸ್ಸಿಗೆ ತೀರಿಕೊಂಡಿದ್ದಾನೆ…..ಮಕ್ಕಳಿರಲಿಲ್ಲ. ಇಂಥಹ ಸಂದರ್ಭದಲ್ಲಿ ಪಕ್ಕದ ಕೋಳಿಹಳ್ಳಿಯಿಂದ ನಮ್ಮ ಮನೆಗೆ ವಲಸೆ ಬಂದಿದ್ದಾಳೆ. ನಂತರ ಆಕೆ ಅವಳ ತವರಿಗೆ ಹೋಗುತ್ತಿದ್ದುದು ವರ್ಷಕ್ಕೆ ಒಮ್ಮೆ ಮಾತ್ರ. ಯಾವುದೋ ಹಬ್ಬದ ಸಂದರ್ಭದಲ್ಲಿ ಬೆಳಿಗ್ಗೆ ಹೋಗಿ ಸಂಜೆ ಬಂದುಬಿಡುತ್ತಿದ್ದಳು…..ಹಬ್ಬಕ್ಕೆ ಹೋಗುವ ವಾರದ ಮೊದಲೇ ತನ್ನೆಲ್ಲಾ ಎಮ್ಮೆಗಳಿಗೆ ಅವಳು ನಾನು ಹಬ್ಬಕ್ಕೆ ಹೋಗುತ್ತೇನೆ. ಆಯಿತವಾರ ನಾನಿರುವುದಿಲ್ಲ. ನೀವು ಗಿರಮಕ್ಕಯ್ಯನಿಗೆ ಹಾಲು ಕೊಡಿ ಹೀಗೆ ಮಾತನಾಡುತ್ತಲೇ ಇರುತ್ತಿದ್ದಳು. ನಮ್ಮ ತುಂಬು ಕುಟುಂಬ ಅವಳ ಮಾತುಗಳಿಗೆ ಹೊಗ್ಗಿಹೋಗಿತ್ತು. ಅವಳು ಗೌರವ ಕೊಡುತ್ತಿದ್ದುದು ನಮ್ಮ ತಂದೆಗೆ ಮಾತ್ರ. ದೊಡ್ಡಪ್ಪ ಇಲ್ಲಿ ನೋಡೊ… ಇದು ಹೀಗಾಗಿದೆ. ಈ ಎಮ್ಮೆಗೆ ಅದಾಗಿದೆ, ಇದಾಗಿದೆ, ವಯಸ್ಸಾಗಿದೆ…..ಲಕ್ಕುರ್ ಸಾಬರಿಗೆ ಹೇಳಿಕಳುಹಿಸಬೇಕು….ಹೀಗೆ ಸಾಗುತ್ತಿತ್ತು ಅವಳ ನಮ್ಮ ತಂದೆ ಸಂಭಾಷಣೆ…………ಎಲ್ಲರನ್ನೂ ಬಾಯಿಗೆ ಬಂದಂತೆ ಬೈಯುತ್ತಾ ಮಾತೆತ್ತಿದರೆ ನಿಮ್ಮಮ್ಮನ್, ಅಕ್ಕನ್…….ಎನ್ನುತ್ತಾ ಕೆಕ್ಕರಿಕೆ ಕಣ್ಣು ಬಿಡುತ್ತಿದ್ದ ಗಿರಿಜಾ ಮೀಸೆ ನರಸೇಗೌಡರು, ಪಾರ್ವತಿಯನ್ನು ಗದರಿಸಿದ್ದನ್ನೂ ಯಾರೂ ನೋಡಿಯೇ ಇರಲಿಲ್ಲಾ ……….ಒಂದೇ ಒಂದು ಬೈಗಳ ಅವಳ ವಿರುದ್ಧ ಆಡಿದ್ದಿಲ್ಲ. ಏಕೆಂದರೆ ಅಷ್ಟೊಂದು ಸ್ವಾಮಿನಿಷ್ಠೆ ಇತ್ತು ಅವಳಿಗೆ. ನಮ್ಮ ಮನೆಯಲ್ಲಿ ಅಳಿದುಳಿದಿದ್ದನ್ನು ಎಲ್ಲವನ್ನೂ ಅವಳು ತಿನ್ನಿತ್ತಿದ್ದಳು. ತಯಾರಿಗೂ ಬೇಡದ್ದು ಪಾರ್ವತಿಗೆ ಮೀಸಲಾಗಿರುತ್ತಿತ್ತು.
ಬದುಕು ಹೀಗೆ ಸಾಗಿದ್ದಾಗಲೇ ನಮ್ಮ ತಂದೆ, ಅವರ ಅಣ್ಣ, ತಮ್ಮಂದಿರಿಗೆ ಭಾಗ ಮಾಡಿಕೊಟ್ಟರು. ಎಲ್ಲಾ ಆಸ್ತಿಯನ್ನು ವಿಭಾಗ ಮಾಡಲು ತಿಂಗಳುಗಟ್ಟಲೆ ಹಿಡಿಯಿತು. ಮೋಜಿಣಿದಾರರು ಊರಿನಲ್ಲಿ ತಿಂಗಳುಗಟ್ಟಲೇ ಠಿಕಾಣಿ ಹೂಡಿ ಕಡೆಗೂ ಭಾಗ ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಬಗೆಯಬಾರದು ಎನ್ನುತ್ತಲೇ ಇದ್ದ ನಮ್ಮ ತಂದೆ ಪ್ರತಿಯೊಂದನ್ನು ಅಣ್ಣ ತಮ್ಮಂದಿರಿಗೆ ಹಂಚಿದರು. ಬೆಂಗಳೂರು, ತುಮಕೂರು, ಅಕ್ಕ ಪಕ್ಕದ ಹತ್ತಾರು ಹಳ್ಳಿಗಳಲ್ಲಿದ್ದ ಹೊಲ, ತೋಟ, ಮನೆ, ಸೈಟುಗಳು, ಊರಿನ ಮುಂಭಾಗದ ಜಮೀನು, ಹಡ್ಲು, ನೊಗ, ಗಾಡಿ, ಕಣ, ಕಣಜ, ಕಣದ ಗುಂಡು, ಹಲುಬೆ, ವಾಡೆ, ಮಡಕೆ, ಹಾರೆ, ಪೊರಕೆ, ಹಳೇ ಕಾಲದ ಭಜರ್ಿ ಬೆತ್ತ, ಕುಚರ್ಿ, ಮೇಜು, ಪೆಟ್ಟಿಗೆ, ಮಾವು, ಆಲ, ಹೊಂಗೆ, ಶೀಗೆ ಮರಗಳು ಹೀಗೆ ಎಲ್ಲವೂ ಮೂರು ಭಾಗವಾಗಿ ಹೋದವು. ಕಡೆಗೆ ದನ ಎಮ್ಮೆ ಕರುಗಳನ್ನು ಹಂಚಲಾಯಿತು. ಪಾರ್ವತಿ ಮಾತ್ರ ನನ್ನ ತಿಪ್ಪೆ ಯಾರಿಗೂ ಕೊಡುವುದಿಲ್ಲ ಎಂದು ಹಠಕ್ಕೆ ಬಿದ್ದಳು. ನಾನು ತುಂಬಿದ ತಿಪ್ಪೆ ಸಗಣಿ ನಮ್ಮಣ್ಣಯ್ಯನಿಗೆ ಮಾತ್ರ ಎಂದು ಜೋರು ಮಾಡಿದರು. ಅವಿಭಕ್ತ ಕುಟುಂಬಕ್ಕೆ ದ್ರೋಹ ಸಲ್ಲದು ಎಂಬ ಸೂತ್ರಕ್ಕೆ ತಲೆಬಾಗಿದ್ದ ನಮ್ಮ ತಂದೆ ಕಡೆಗೂ ತಿಪ್ಪೆಯನ್ನೂ ಬಿಡದೆ ಹಂಚಿಬಿಟ್ಟರು. ಯಾರಿಗೂ ಹೆದರದ ನಮ್ಮ ತಂದೆ ಪಾರ್ವತಿಯನ್ನು ಅಂದು ಗದರಿಸಲಿಲ್ಲ. ಯಾರನ್ನೂ ಬೈಯ್ಯದೆ ಬಿಡದ ಪಾರ್ವತಿ ತಿಪ್ಪೆ ಹಂಚಿದರೂ ನಮ್ಮ ತಂದೆಯ ಮೇಲೆ ಹರಿಆಯಲಿಲ್ಲ. ನಮ್ಮ ತಾಯಿ ಹಾಗೂ ಅವರಿಬ್ಬರ ಕಣ್ಣಲ್ಲಿ ಮಾತ್ರ ಕಣ್ಣೀರಿತ್ತು. ಮನೆಯಲ್ಲಿದ್ದ ಧವಸ ಧಾನ್ಯ ಹಂಚುವಾಗಲಂತೂ ನಾವೆಲ್ಲಾ ಅಮ್ಮನ ಜತೆ ಕಣ್ಣೀರಾಕಿದೆವು.
ಎಲ್ಲಾ ಹಂಚಿದ ಮೇಲೆ ತಿಪ್ಪೆಯಲ್ಲಿದ್ದ ಗೊಬ್ಬರ ತುಂಬಿಕೊಳ್ಳಲು ನಮ್ಮ ತಂದೆ ಅಣ್ಣನ ಮೊಮ್ಮಗ ರಾಜ ಗಾಡಿ ಕಟ್ಟಿಕೊಂಡು ಆಳುಗಳ ಜತೆ ಹೋಗಿದ್ದ. ತಿಪ್ಪೆ, ಸಗಣಿ, ಗೊಬ್ಬರ ಎಮ್ಮೆ ಕರುಗಳ ಜತೆ ಅವಿನಾಭಾವ ಹೊಂದಿದ್ದ ಪಾರ್ವತಿ, ಅವನೊಂದಿಗೆ ಜಗಳಕ್ಕೆ ಬಿದ್ದು ಸಗಣಿ ಮುಟ್ಟದಂತೆ ತಾಕೀತು ಮಾಡಿ ಅವನ ಗಾಡಿ ತಡೆದಿದ್ದಳು. ಅವಳನ್ನು ಸಮಾಧಾನಪಡಿಸಿ ಕರೆದುಕೊಂಡು ಬರಲು ಅಮ್ಮ ಹೋಗುವಷ್ಟರಲ್ಲೇ ಪಾಪಿ, ರಾಜ ಗಾಡಿ ಹೊಡೆಯಲು ಬಳಸುತ್ತಿದ್ದ ಬಾರುಗೋಲು ತೆಗೆದುಕೊಂಡು ಹಿಗ್ಗಾಮಗ್ಗ ಪಾರ್ವತಿಯನ್ನು ಥಳಿಸಿಬಿಟ್ಟಿದ್ದ. ಆಕೆ ಅಲ್ಲೇ ಉಚ್ಚೆ ಕಕ್ಕಸ್ಸು ಮಾಡಿಕೊಂಡು ಕುಸಿದುಬಿದ್ದಿದ್ದಳು. ಅಯ್ಯೋ ಅಣ್ಣಯ್ಯ, ಅಕ್ಕಯ್ಯ, ಸಗಣಿ ತಗೆದುಕೊಂಡು ಹೋಗುತ್ತಿದ್ದಾನೆ ನೋಡೆ ಎಂದು ಶಾಪ ಹಾಕಿ ಗೋಳಿಡುತ್ತಿದ್ದಳು……ಅಮ್ಮ ಅವಳನ್ನು ಎತ್ತಿಕೊಂಡು ಬಂದು ಸ್ನಾನ ಮಾಡಿಸಿ, ಬಾಸುಂಡೆಗಳಿಗೆ ಮುಲಾಮು ಹಚ್ಚಿ  ಸಾಂತ್ವಾನ ಮಾಡಿದರು. ರಾಜನ ನಿರ್ದಯಿ ಹೊಡತಗಳಿಗೆ ಸಿಕ್ಕಿ ಶಾಕ್ಗೆ ಒಳಗಾಗಿದ್ದ ಪಾರ್ವತಿ ರಾತಿಯಿಡೀ ಕೊರಗುತ್ತಿದ್ದಳು. ತಿಪ್ಪೆ ತುಂಬಿಕೊಂಡು ಹೋದ ನಂತರ ಆಗಾಗ್ಗೆ ತಿಪ್ಪೆ ಕಡೆಗೆ ಹೋಗಿ ನೋಡಿಕೊಂಡು ಬಂದು ಹಿಡಿ ಶಾಪ ಹಾಕಿ ಬಂದು ಮಲಗುತ್ತಿದ್ದಳು. ಅದೊಂದು ದಿನ ಬೆಳಿಗ್ಗೆ ಅಮ್ಮನನ್ನು ಕರೆದು ಅಕ್ಕಯ್ಯ ಈ ಗಂಟನ್ನು ಇಟ್ಟುಕೋ ಎಂದು ಹಳೆ ಬಟ್ಟೆಯ ಗಂಟನ್ನು ಕೊಟ್ಟಿದ್ದಳು. ಅಮ್ಮ ಹಳೇ ಬಟ್ಟೆ ಗಂಟೆದು ಅಲ್ಲೆಲ್ಲೊ ಇಟ್ಟಿದ್ದರು. ಇದಾದ ಒಂದೆರಡು ದಿನದ ಬೆಳಗಿನ ಜಾವದಲ್ಲಿ   ಪಾರ್ವತಿ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಬಿಟ್ಟಳು, ಅವಳ ಮೂಗಕರ್ಿ ಎಮ್ಮೆ, ಕರುಗಳು, ಆ ದಿನ ಕೊಟ್ಟಿಗೆಯಲ್ಲೇ ಹೂಂಕರಿಸಿ ಗೀಳಿಡುತ್ತಿದ್ದವು…..ಅವುಗಳ ಗಂಜಲ ಎತ್ತುವವರು,….ಅವುಗಳನ್ನು ಕೊಟ್ಟಿಗೆಯಿಂದ ಹೊರಗೆ ಕಟ್ಟುವವರು ಯಾರೂ ಇರಲಿಲ್ಲ. ಎಲ್ಲರೂ ಪಾರ್ವತಿ ಶವ ಸಂಸ್ಕಾರಲ್ಲಿ ಬಿಸಿಯಾಗಿದ್ದರು…………….
ಪಾರ್ವತಿ ನೀಡಿದ್ದ ಹಳೆಯ ಬಟ್ಟೆ ಗಂಟನ್ನು ಅವಳ ಊರಿನಿಂದ ಬಂದಿದ್ದ ಅವಳ ಸಂಬಂಧಿಕರಿಗೆ ಅಮ್ಮ ಕೊಟ್ಟರು. ಅವರು ಗಂಟು ಬಿಚ್ಚಿ ನೋಡಿದಾಗ ಪಕ್ಕದ ಊರಿನ ಎಮ್ಮೆ ಗಳಿಗೆ ಕೋಣ ಹತ್ತಿಸಿ ಪಡೆಯುತ್ತಿದ್ದ ಐದು ರುಪಾಯಿಗಳ ನೋಟುಗಳ ಒಂದು ಕಂತೆ ನೋಟುಗಳು, ಪೆನ್ಷನ್ ನಿಂದ ಬರುತ್ತಿದ್ದ ಹತ್ತು ರುಪಾಯಿಗಳ ಜೋಡಿಸಿಟ್ಟ ಮತ್ತೊಂದು ಕಂತೆ ಅಲ್ಲಿದ್ದವಂತೆ. ಅದನ್ನು ನೀವೆ ಇಟ್ಟುಕೊಳ್ಳಿ ಎಂದು ಅಮ್ಮ ಅವರ ಸಂಬಂಧಿಕರಿಗೆ ಹೇಳಿ ಕಳುಹಿಸಿದರು.
ಇದಾದ ಹಲವು ವರ್ಷಗಳ ಬಳಿಕ ಪಾರ್ವತಿ ಶವವನ್ನು ಹೂತಿದ್ದ ಗುಂಡಿ ಎಲ್ಲಿದೆ ಎಂದು ಅಮ್ಮನನ್ನು ಪ್ರಶ್ನಿಸಿದೆ, ನಿಮ್ಮಣ್ಣ ಮಾವಿನ ತೋಟದ ಮರಗಳನ್ನು ತೆಗೆಸಿ ಹೊಟೇಲ್ ಕಟ್ಟಿಸಿದ್ದಾನಪ್ಪ. ಪಾರ್ವತಿ ಗುಂಡಿ ಆ ಹೊಟೇಲ್ನ ಅಡಿಯಲ್ಲಿ ಸೇರಿಹೋಗಿದೆ ಎಂದೆ. ಪಾರ್ವತಿ ಬಗ್ಗೆ ನಮ್ಮ ಅಕ್ಕಂದಿರನ್ನು ಅವಳ ಬಗ್ಗೆ ಬರೆಯಬೇಕು ಸ್ವಲ್ಪ ವಿವರಗಳಿದ್ದರೆ ಹೇಳಿ ಎಂದಿದ್ದಕ್ಕೆ ಅವರೆಲ್ಲರ ಕಣ್ಣಲ್ಲಿ ನೀರು ತುಂಬಿತ್ತಷ್ಟೇ. ಅವಳೊಬ್ಬಳು ದೊಡ್ಡ ಗುಣದ ಹೆಣ್ಣೆಂದರು….ಕಣ್ಣೀರು ತುಂಬಿ ಬಂತು ಆಕೆ ನಮ್ಮಮ್ಮನಿಗಿಂತ ಮಿಗಿಲಾಗಿದ್ದಳು………ಅವಳ ಒಂದೇ ಒಂದು ಫೋಟೋಗಾಗಿ ಹುಡುಕಾಟ ನಡೆಸಿದೆ ಅದೆಲ್ಲೂ ಸಿಗಲಿಲ್ಲ.

 • ಪುಟಗಳು

 • Flickr Photos

 • ಮೇ 2012
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಏಪ್ರಿಲ್   ಮಾರ್ಚ್ »
   12345
  6789101112
  13141516171819
  20212223242526
  2728293031  
 • ವಿಭಾಗಗಳು